ಹೂವಪ್ಪ ಐ ಹೆಚ್. ಬೆಂಗಳೂರು.
ಹೋಟೆಲ್, ರೆಸ್ಟೊರೆಂಟ್, ಬಜ್ಜಿ, ಬೋಂಡಾ ವ್ಯಾಪಾರಿಗಳಿಗೆ ಇದು ಸಿಹಿ ಸುದ್ದಿ. (Market trend) ಅಡುಗೆ ಎಣ್ಣೆ ಬೆಲೆಯಲ್ಲಿ ಆರು ತಿಂಗಳ ಹಿಂದೆ ಲೀಟರಿಗೆ ಸುಮಾರು 10-15 ರೂ. ಇಳಿಕೆಯಾಗಿತ್ತು. ಈಗ ಮತ್ತೆ ತಗ್ಗಿದೆ.
ನಾಲ್ಕೈದು ತಿಂಗಳ ಹಿಂದೆ 10 ಲೀಟರ್‌ನ ಪಾಮ್ ಆಯಿಲ್ ಸಗಟು ಬೆಲೆ 1050 ರೂ.ನಷ್ಟಿತ್ತು. ಈಗ 945 ರೂ.ಗೆ ಇಳಿದಿದೆ. ಅಂದರೆ ಲೀಟರ್‌ಗೆ 10-11 ರೂ. ಇಳಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆಯ 10 ಲೀಟರ್ ಬಾಕ್ಸ್‌ನ ದರವು 1560 ರೂ.ಗಳಿಂದ 1460 ರೂ. ಗೆ ಇಳಿದಿದೆ. 10 ರೂ. ತಗ್ಗಿದೆ.
ಸೋಯಾ, ರೈಸ್ ಬ್ರೌನ್ ಆಯಿಲ್, ಸಾಸಿವೆ, ಎಣ್ಣೆ ಹಾಗೂ ವನಸ್ಪತಿ ಬೆಲೆಯಲ್ಲೂ ಲೀಟರಿಗೆ ತಲಾ 10-15 ರೂ. ಇಳಿಕೆಯಾಗಿದೆ. ಕಳೆದ ಕಳೆದ ಸಾಲಿನ ಮಾರ್ಚ್- ಏಪ್ರಿಲ್‌ಗೆ ಹೋಲಿಸಿದರೆ ಲೀಟರ್‌ಗೆ ಅಂದಾಜು ಒಟ್ಟು 20-25 ರೂ. ನಷ್ಟು ಇಳಿಕೆಯಾದಂತಾಗಿದೆ.
ಮಲೇಷ್ಯಾ, ಇಂಡೋನೇಷ್ಯಾ ಮೂಲದ ತಾಳೆ ಎಣ್ಣೆ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪಾಮ್ ಆಯಿಲ್, ಸೂರ್ಯಕಾಂತಿ ಎಣ್ಣೆಯಲ್ಲಿ ಲೀಟರ್‌ಗೆ 10-15 ರೂ. ಇಳಿಯಲಿದೆ ಎಂದು ಸಗಟು ಖಾದ್ಯ ತೈಲ ವ್ಯಾಪಾರಿಗಳು ಹೇಳಿದ್ದಾರೆ.
ಅಡುಗೆ ಎಣ್ಣೆಯ ಆಮದು ಹೆಚ್ಚಳ:
ಮಲೇಷಿಯಾ, ಇಂಡೋನೇಷ್ಯಾದಲ್ಲಿ ದರ ಇಳಿಕೆಯ ಹಿನ್ನೆಲೆಯಲ್ಲಿ ಭಾರತವು ಕಳೆದ 11 ತಿಂಗಳಲ್ಲಿ 17.12 ಲಕ್ಷ ಟನ್‌ನಷ್ಟು ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಮಾಡಿಕೊಂಡಿದೆ. ಇದರೊಂದಿಗೆ ಆಮದಿನ ಪ್ರಮಾಣ ಎರಡೂವರೆ ಪಟ್ಟು ಏರಿಕೆಯಾಗಿದೆ ಎಂದು ಕೈಗಾರಿಕಾ ಸಂಸ್ಥೆ SEA ತಿಳಿಸಿದೆ. ಭಾರತ, 2021-22 ನವೆಂಬರ್-ಸೆಪ್ಟೆಂಬರ್ ಅವಧಿಯಲ್ಲಿ 130.1 ಲಕ್ಷ ಟನ್ ತೈಲವನ್ನು ಆಮದು ಮಾಡಿದೆ.
ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎ) ಪ್ರಕಾರ, ಇಂಡೋನೇಷ್ಯಾ ಮೂರು ತಿಂಗಳ ಹಿಂದೆ ಕಚ್ಚಾ ಪಾಮ್ ಆಯಿಲ್ (ಸಿಪಿಒ) ಮೇಲಿನ ಸುಂಕವನ್ನು ಹೆಚ್ಚು ಏರಿಸಿದ್ದು, ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿದೆ. ಇದು ಇಂಡೋನೇಷಿಯಾದ ರಫ್ತುದಾರರನ್ನು ಉತ್ತೇಜಿಸಿದೆ. ಕಳೆದ ನವೆಂಬರ್-ಸೆಪ್ಟೆಂಬರ್ ಅವಧಿಯಲ್ಲಿ, ಸೋಯಾಬೀನ್ ಮತ್ತು ಸೂರ್ಯಕಾಂತಿ ತೈಲಗಳ ಆಮದು ಕೂಡ 44.58 ಲಕ್ಷ ಟನ್‌ಗಳಿಂದ 56.35 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಖಾದ್ಯ ತೈಲದ ಆಮದು ದರ ಇಳಿಕೆಯ ಪರಿಣಾಮ ಸ್ಥಳೀಯವಾಗಿ ಬೆಲೆಗಳು ಇಳಿಮುಖವಾಗಿವೆ ಎಂದು ರಾಧಾಕೃಷ್ಣ ಆಯಿಲ್ ಮಿಲ್ ಮಾಲೀಕ ಗೋವಿಂದರಾಜ್ ತಿಳಿಸಿದ್ದಾರೆ.
ಟೊಮೆಟೊ ದುಬಾರಿ
ಟೊಮೊಟೊ ದರ ದಿಡೀರ್ ಏರಿಕೆಯಾಗಿದೆ. ಪ್ರತಿಕೂಲ ಹವಾಮಾನದ ಪರಿಣಾಮ ಟೊಮೊಟೊ ಬೆಳೆಗೆ ಅಂಗಮಾರಿ ರೋಗ ತಗುಲಿದೆ. ಹೀಗಾಗಿ ಶೇ. 50 ರಷ್ಟು ಇಳುವರಿ ಕಡಿಮೆಯಾಗಿದೆ. ಇದು ಟೊಮೊಟೊ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕೇವಲ 3-4 ದಿನದ ಹಿಂದೆ ಚಿಲ್ಲರೆ ದರದಲ್ಲಿ 10-15 ರೂ.ಗೆ ಸಿಗುತ್ತಿದ್ದ ಟೊಮೊಟೊಗೆ ಈಗ ದಿಢೀರ್ 30-40 ರೂ. ಕೊಡಬೇಕಾಗಿದೆ.
ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ಟೊಮೊಟೊ ಪೂರೈಕೆ ಕಡಿಮೆಯಾಗಿದೆ. ಈ ಹಿಂದೆ ದಿನಕ್ಕೆ ಅಂದಾಜು 90-100 ಟನ್‌ನಷ್ಟು ಬರುತ್ತಿದ್ದ ಟೊಮೊಟೊದ ಪೂರೈಕೆ ಈಗ 50-60 ಟನ್‌ಗೆ ಇಳಿಕೆಯಾಗಿದೆ.