ನವ ದೆಹಲಿ: ರೈತರಿಗೆ ಇದು ಸಿಹಿ ಸುದ್ದಿ. ಕೇಂದ್ರ ಸಚಿವ ಸಂಪುಟ ಮಂಗಳವಾರ 2023-24ರ ಸಾಲಿನ ರಾಬಿ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು (MSP) ಏರಿಸಿದೆ.
ಗೋಧಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 110 ರೂ. ಏರಿಸಲಾಗಿದೆ. ಅಂದರೆ 2015 ರೂ.ಗಳಿಂದ 2125 ರೂ.ಗೆ ಏರಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಂಎಸ್‌ಪಿ ಎಂದರೆ ಸರ್ಕಾರವು ರೈತರಿಂದ ಖರೀದಿಸುವ ಧಾನ್ಯಗಳಿಗೆ ನೀಡುವ ದರವಾಗಿದೆ. ಪ್ರಸ್ತುತ ಸರ್ಕಾರ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುತ್ತದೆ.
ಸಾಸಿವೆಯ ಎಂಎಸ್‌ಪಿಯಲ್ಲಿ ಕ್ವಿಂಟಾಲ್‌ಗೆ 400 ರೂ. ಏರಿಸಲಾಗಿದ್ದು, 5,450 ರೂ.ಗೆ ವೃದ್ಧಿಸಲಾಗಿದೆ. ಕೆಂಪು ತೊಗರಿಯ (ಮಸೂರ್) ಎಂಎಸ್‌ಪಿ ದರದಲ್ಲಿ ಕ್ವಿಂಟಾಲ್‌ಗೆ 500 ರೂ. ಏರಿಸಲಾಗಿದೆ.
ಬಾರ್ಲಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ 100 ರೂ. ಹೆಚ್ಚಳವಾಗಿದ್ದು, ಕ್ವಿಂಟಾಲ್‌ಗೆ 1,635 ರೂ.ಗಳಿಂದ 1,735 ರೂ.ಗೆ ಏರಿಕೆಯಾಗಿದೆ. ಕಡಲೆ ಕಾಳಿನ ಎಂಎಸ್‌ಪಿಯಲ್ಲಿ 105 ರೂ. ಏರಿಕೆಯಾಗಿದ್ದು, ಕ್ವಿಂಟಾಲ್‌ಗೆ 5,230 ರೂ.ಗಳಿಂದ 5,335 ರೂ.ಗೆ ವೃದ್ಧಿಸಿದೆ.