ಬೆಂಗಳೂರು: ಭಾರತವು 300 ಕಿಲೋಮೀಟರ್ ದೂರದ ತನಕದ ಗುರಿಯನ್ನು ಭೇದಿಸಬಲ್ಲ ಅಸ್ತ್ರ ಎಂಕೆ-2 (Astra MK-3) ಮತ್ತು ಎಂಕೆ-3 ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತದೆ.
ಈ ಪ್ರಬಲ ಅಸ್ತ್ರ ಕ್ಷಿಪಣಿಗಳು 2023-2024ರಲ್ಲಿ ಪರೀಕ್ಷಾರ್ಥ ಉಡಾವಣೆಗೊಳ್ಳಲಿವೆ. ಡಿಆರ್‌ಡಿಒ ಇವುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅಸ್ತ್ರ ಕ್ಷಿಪಣಿಗಳು air-to-air ಮಿಸೈಲ್‌ಗಳಾಗಿವೆ. ಅಂದರೆ ಇವುಗಳನ್ನು ಒಂದು ಯುದ್ಧ ವಿಮಾನದ ಮೂಲಕ ಮತ್ತೊಂದು ವಿಮಾನವನ್ನು ಹೊಡೆದುರುಳಿಸಲು ಬಳಸಬಹುದು.
ಈ ಎರಡು ಕ್ಷಿಪಣಿಗಳಲ್ಲಿ ಒಂದು 160 ಕಿ.ಮೀ ಹಾಗೂ ಇನ್ನೊಂದು 300 ಕಿ.ಮೀ ದೂರದ ಗುರಿಯನ್ನು ಭೇದಿಸಬಲ್ಲುದು ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈಗಿನ ಅಸ್ತ್ರ ಎಂಕೆ-1 ಕ್ಷಿಪಣಿಯು 100 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲುದು. ರಕ್ಷಣಾ ಸಚಿವಾಲಯವು ಮೇ 31ರಂದು ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ಗೆ (ಬಿಡಿಎಲ್) 2,971 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿದೆ. ಅಸ್ತ್ರ ಎಂಕೆ-1 ಕ್ಷಿಪಣಿಗಳ ಉತ್ಪಾದನೆಗೆ ಇದು ಸಹಕರಿಸಲಿದೆ. ಡಿಆರ್‌ಡಿಒ, ಬಿಡಿಎಲ್‌ಗೆ ತಂತ್ರಜ್ಞಾನವನ್ನು ವರ್ಗಾಯಿಸಲಿದೆ. ವಾಯುಪಡೆ ಮತ್ತು ನೌಕಾಪಡೆಗೆ ಈ ಕ್ಷಿಪಣಿಗಳು ಸೇರ್ಪಡೆಯಾಗಲಿದೆ.
” ರಾಡಾರ್‌ಗಳ ಸಾಮರ್ಥ್ಯ ಹೆಚ್ಚಳದಿಂದ ಬಹು ದೂರದ ಗುರಿಗಳನ್ನು ಭೇದಿಸುವ ಕ್ಷಿಪಣಿಗಳ ಅಭಿವೃದ್ಧಿಗೆ ಹಾದಿ ಸುಗಮವಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಅಸ್ತ್ರ ಎಂಕೆ-2, ಅಸ್ತ್ರ ಎಂಕೆ-3 ಕ್ಷಿಪಣಿಗಳ ಅಭಿವೃದ್ಧಿ ಮುಖ್ಯ ʼʼ ಎಂದು ಏರ್ ಮಾರ್ಶಲ್ ಅನಿಲ್ ಛೋಪ್ರಾ ತಿಳಿಸಿದ್ದಾರೆ.
ಚೀನಾ PL-15 ಎಂಬ ಕ್ಷಿಪಣಿ ತಯಾರಿಸಿದ್ದು, 200 ಕಿ.ಮೀ ದೂರದ ಗುರಿಯನ್ನು ಭೇದಿಸಬಲ್ಲುದು. ಪಾಶ್ಚಿಮಾತ್ಯ ದೇಶಗಳಲ್ಲಿ 160 ಕಿ.ಮೀ ದೂರದ ಟಾರ್ಗೆಟ್ ಧ್ವಂಸಗೊಳಿಸಬಲ್ಲ ಕ್ಷಿಪಣಿಗಳು ಇವೆ. ಭಾರತದ ಅಸ್ತ್ರ ಕ್ಷಿಪಣಿಗಳು ಇದೇ ಮಾದರಿಯ ಪ್ರಬಲ ಕ್ಷಿಪಣಿಗಳ ಸಾಲಿಗೆ ಸೇರಲಿದೆ.
ಎಂಕೆ-1 ಕ್ಷಿಪಣಿಗಳನ್ನು ಸುಖೋಯ್-30 ಯುದ್ಧ ವಿಮಾನಗಳೊಂದಿಗೆ ಸಂಯೋಜಿಸಲಾಗಿದೆ. ಇವಗಳನ್ನು ತೇಜಸ್ ಲಘು ಯುದ್ಧ ವಿಮಾನದ ಜತೆಗೂ ಸಂಯೋಜಿಸಲಾಗುತ್ತಿದೆ. ಇದರಿಂದ ಭಾರತೀಯ ಯುದ್ಧ ವಿಮಾನಗಳ ಬಲ ಹೆಚ್ಚಿದಂತಾಗಿದೆ. ನೌಕಾಪಡೆಯ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲೂ ಅಸ್ತ್ರ ಎಂಕೆ-1 ಕ್ಷಿಪಣಿಯನ್ನು ಅಳವಡಿಸಲಾಗುತ್ತಿದೆ.