Site icon Vistara News

INDIA GDP : 2ನೇ ತ್ರೈಮಾಸಿಕದ GDP ಶೇ. 7.6 ; ಕಳೆದ ಬಾರಿಗಿಂತ ಹೆಚ್ಚಾ, ಕಡಿಮೆನಾ?

GDP growth INDIA

ನವದೆಹಲಿ: 2023-24ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ (2023-24 Financial Year) ಭಾರತದ ಒಟ್ಟು ದೇಶೀಯ ಉತ್ಪನ್ನ (INDIA GDP Growth) ಅಂಕಿ ಅಂಶಗಳು ಘೋಷಣೆಯಾಗಿವೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistical Office – NSO) ಗುರುವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಎರಡನೇ ತ್ರೈಮಾಸಿಕದ ಜಿಡಿಪಿ ಶೇ. 7.6ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ಜುಲೈನಿಂದ ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗಿನ ಚಿತ್ರಣ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ. 6.2ರಷ್ಟಿತ್ತು. ಇನ್ನೊಂದು ಮಹತ್ವದ ಸಂಗತಿ ಎಂದರೆ, ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣ ಶೇ. 7.8ರಷ್ಟಿತ್ತು.

ಜಿಡಿಪಿ ಲೆಕ್ಕಾಚಾರಗಳ ಆಧಾರದಲ್ಲಿ ದೇಶ ಹೆಮ್ಮೆ ಪಡಬಹುದಾದ ಹಲವಾರು ಸಂಗತಿಗಳು ಇವೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತ ತನ್ನ ಶಕ್ತಿಯನ್ನು ತೋರ್ಪಡಿಸಿದೆ. ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಚೀನಾ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಸಾಧಿಸಿರುವ ಪ್ರಗತಿ ಶೇ. 4.9 ಮಾತ್ರ.

ಹಾಗಿದ್ದರೆ ಯಾವ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆ

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಲೆಕ್ಕಾಚಾರದ ಪ್ರಕಾರ, ನಿರ್ದಿಷ್ಟ ಕ್ಷೇತ್ರಗಳ ನಿವ್ವಳ ಮೌಲ್ಯ ವರ್ಧನೆ (Gross Value added-GVA) ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಇದೆ. ಕೃಷಿ ಕ್ಷೇತ್ರವು ಶೇ. 1.2ರಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ, ಇದು ಕಳೆದ ಸಾಲಿನ (2022-23) ಬೆಳವಣಿಗೆ ದರವಾಗಿರುವ ಶೇ. 2.5ಕ್ಕಿಂತ ಕಡಿಮೆಯಾಗಿದೆ.

ಉತ್ಪಾದನಾ ವಲಯದಲ್ಲಿ ಈ ಬಾರಿ ದಾಖಲಾಗಿರುವ ಬೆಳವಣಿಗೆ ದರ 13.9 ಶೇಕಡಾ. ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ. 3.8ರಷ್ಟು ಕಡಿಮೆಯಾಗಿದೆ.

ಹಾಗಿದ್ದರೆ ಅರ್ಧ ವರ್ಷದ ಜಿಡಿಪಿ ಎಷ್ಟಾಯಿತು?

ಗಮನಿಸಿ 2023-24ನೇ ಸಾಲಿನ ಮೊದಲ ತ್ರೈಮಾಸಿಕದ ಜಿಡಿಪಿ ಶೇ. 7.8 ಇತ್ತು. ಈಗ ಪ್ರಕಟವಾಗಿರುವ ಎರಡನೇ ತ್ರೈಮಾಸಿಕದ ಜಿಡಿಪಿ 7.6 ಶೇಕಡಾ ಇದೆ. ಅಂದರೆ ಈ ಸಾಲಿನ ಮೊದಲ ಅರ್ಥ ವರ್ಷದ ಜಿಡಿಪಿ ಶೇ. 7.7 ಆಯಿತು. ಕಳೆದ ವರ್ಷ ಇದೇ ಅವಧಿಯಲ್ಲಿ ಎಷ್ಟಿತ್ತು ಎಂದು ಗಮನಿಸುವುದಾದರೆ ಅದು ಶೇ. 9.5 ಇತ್ತು. ಅಂದರೆ ಒಟ್ಟಾರೆ ಅರ್ಧ ವಾರ್ಷಿಕ ಜಿಡಿಪಿ ಪ್ರಮಾಣ ಶೇ. 1.8ರಷ್ಟು ಕಡಿಮೆಯಾಯಿತು.

ಇದನ್ನೂ ಓದಿ: Equity Market: 4 ಟ್ರಿಲಿಯನ್ ಡಾಲರ್‌ ತಲುಪಿದ ಭಾರತೀಯ ಈಕ್ವಿಟಿ ಮಾರುಕಟ್ಟೆ

ನಿರೀಕ್ಷೆ ಮೀರಿದ ಬೆಳವಣಿಗೆ

ನಿಜವೆಂದರೆ, ಜಿಡಿಪಿ ಬೆಳವಣಿಗೆ ದರ ಕಳೆದ ವರ್ಷದ ಇದೇ ಅವಧಿಗಿಂತ ಕಡಿಮೆ ಇದೆಯಾದರೂ ನಮ್ಮ ನಿರೀಕ್ಷೆಗಿಂತ ಹೆಚ್ಚಾಗಿದೆ. ಯಾಕೆಂದರೆ, ಹಲವಾರು ಆರ್ಥಿಕ ತಜ್ಞರು ಮತ್ತು ಸಂಸ್ಥೆಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಬೆಳವಣಿಗೆ ನಡೆದಿದೆ.

  1. ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಈಗಾಗಲೇ ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇ.6.5ರಿಂದ ಶೇ.7.1ರಷ್ಟು ಏರಿಕೆ ಆಗಲಿದೆ ಎಂದಿದ್ದರು.
  2. ರೇಟಿಂಗ್‌ ಏಜನ್ಸಿಯಾದ ಇಕ್ರಾ ಸಂಸ್ಥೆಯ ತಜ್ಞರ ಪ್ರಕಾರ ಭಾರತದ ಜಿಡಿಪಿಯು ಎರಡನೇ ತ್ರೈಮಾಸಿಕದಲ್ಲಿ ಶೇ.7ರಷ್ಟು ಇರಲಿದೆ ಎಂದಿತ್ತು.
  3. ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಶೇ.6.9ರಿಂದ ಶೇ.7.1ರಷ್ಟು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿತ್ತು.
  4. ಬಾರ್‌ಕ್ಲೇಸ್‌ ಇಂಡಿಯಾ ಶೇ.6.5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು.

Exit mobile version