ನವ ದೆಹಲಿ: ಭಾರತವು ಕಳೆದ ಮೇನಲ್ಲಿ ರಷ್ಯಾದಿಂದ ದಾಖಲೆಯ ಕಚ್ಚಾ ತೈಲ ಆಮದು ಮಾಡಿದೆ. ಸೌದಿ ಅರೇಬಿಯಾ, ಇರಾಕ್, ಯುಎಇ ಮತ್ತು ಅಮೆರಿಕದಿಂದ ತರಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಕಚ್ಚಾ ತೈಲವನ್ನು ರಷ್ಯಾದಿಂದ ಭಾರತ ಕಳೆದ ಮೇನಲ್ಲಿ ತರಿಸಿಕೊಂಡಿದೆ ಎಂದು ಅಂಕಿ ಅಂಶಗಳು ತಿಳಿಸಿದೆ. (Russian oil) ಭಾರತವು ಕಳೆದ ಮೇನಲ್ಲಿ ದಿನಕ್ಕೆ 19.6 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲವನ್ನು ಆಮದು ಮಾಡಿತ್ತು. ಇದು ಏಪ್ರಿಲ್‌ಗೆ ಹೋಲಿಸಿದರೆ 15% ಹೆಚ್ಚು ಎಂದು ಎನರ್ಜಿ ಕಾರ್ಗೊ ಟ್ರ್ಯಾಕರ್ ವೊರ್ಟೆಕ್ಸಾ ತಿಳಿಸಿದೆ.
ಕಳೆದೊಂದು ದಶಕದಲ್ಲಿ ಇರಾಕ್, ಯುಎಇ ಮತ್ತು ಸೌದಿ ಅರೇಬಿಯಾ ಭಾರತಕ್ಕೆ ಅತಿ ಹೆಚ್ಚು ತೈಲವನ್ನು ಪೂರೈಸುತ್ತಿದ್ದ ದೇಶಗಳಾಗಿತ್ತು. ಆದರೆ ಈಗ ಇವೆಲ್ಲಾ ರಾಷ್ಟ್ರಗಳಿಂದ ಒಟ್ಟು ಆಮದು ಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚು ತೈಲವನ್ನು ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ.
ಕಳೆದ ಮೇನಲ್ಲಿ ಇರಾಕ್ ದಿನಕ್ಕೆ 8.3 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಸಿತ್ತು. ಸೌದಿ ಅರೇಬಿಯಾ 5.60 ಲಕ್ಷ ಬ್ಯಾರೆಲ್, ಯುಎಇ 2.03 ಲಕ್ಷ ಬ್ಯಾರೆಲ್, ಅಮೆರಿಕ 1.38 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಸಿತ್ತು. ಭಾರತ ಈಗ ತನ್ನ ಕಚ್ಚಾ ತೈಲ ಆಮದಿನಲ್ಲಿ ಸುಮಾರು 42% ಪಾಲನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಾವಾರು ಆಮದು ಲೆಕ್ಕದಲ್ಲಿ ಇದು ಗರಿಷ್ಠ ಮೊತ್ತವಾಗಿದೆ. ಇದರ ಪರಿಣಾಮ ಕೊಲ್ಲಿ ರಾಷ್ಟ್ರಗಳಿಂದ ಆಮದು ಇಳಿಕೆಯಾಗಿದೆ. ಭಾರತದ ತೈಲ ಆಮದಿನಲ್ಲಿ ಒಪೆಕ್ ಪಾಲು (OPEC) 39%ಕ್ಕೆ ಮೇನಲ್ಲಿ ಇಳಿಕೆಯಾಗಿತ್ತು.
ಒಂದು ಕಾಲದಲ್ಲಿ ಒಪೆಕ್‌ನಿಂದ (ಮಧ್ಯಪ್ರಾಚ್ಯ ಅಥವಾ ಕೊಲ್ಲಿ ರಾಷ್ಟ್ರಗಳು ಮತ್ತು ಆಫ್ರಿಕಾ) ಭಾರತ 90% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಕಳೆದ ವರ್ಷ ಉಕ್ರೇನ್-ರಷ್ಯಾ ಸಮರದ ಬಳಿಕ ಚಿತ್ರಣ ಬದಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಪರಿಣಾಮ ರಷ್ಯಾ ಕೂಡ ಡಿಸ್ಕೌಂಟ್ ದರದಲ್ಲಿ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುತ್ತಿದೆ. ಕಳೆದ ವರ್ಷ ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಕಚ್ಚಾ ತೈಲ ದರ ಸ್ಫೋಟವಾಗಿತ್ತು. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್ ದರ 130 ಡಾಲರ್‌ಗೆ ಜಿಗಿದಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 75 ಡಾಲರ್ ಆಸುಪಾಸಿನಲ್ಲಿದೆ. ಭಾರತವು ಬ್ರೆಂಟ್ ಮಾದರಿಯ ಕಚ್ಚಾ ತೈಲವನ್ನು ಈ ಹಿಂದೆ ಹೆಚ್ಚು ಆಮದು ಮಾಡಿಕೊಳ್ಳುತ್ತಿತ್ತು.
ಒಪೆಕ್ ಸಾಮಾನ್ಯವಾಗಿ ಹೆಚ್ಚು ರಫ್ತು ಮಾಡುವ ಕಚ್ಚಾ ತೈಲ ಮಾರಿ ಇದಾಗಿದೆ. ಮುಂಬರುವ ದಿನಗಳಲ್ಲಿ ರಷ್ಯಾ ತನ್ನ ಕಚ್ಚಾ ತೈಲೋತ್ಪಾದನೆಯನ್ನು ಕಡಿತಗೊಳಿಸಿದರೆ ಮಾತ್ರ ಭಾರತಕ್ಕೆ ವೆಚ್ಚ ಹೆಚ್ಚಲಿದೆ. ಆದರೆ ಸದ್ಯದ ಮಟ್ಟಿಗೆ ರಷ್ಯಾ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲ ಪೂರೈಸುವ ಸಾಧ್ಯತೆ ಹೆಚ್ಚು. ಏಕೆಂದರೆ ಉಕ್ರೇನ್ ಕುರಿತ ಸಂಘರ್ಷ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಯುರೋಫ್ ಹಾಗೂ ಪಾಶ್ಚಿಮಾತ್ಯ ದೇಶಗಳು ತೈಲ ಮಾರುಕಟ್ಟೆ ವಿಚಾರದಲ್ಲಿ ರಷ್ಯಾವನ್ನು ದೂರ ಇಡಲು ಬಯಸುತ್ತಿವೆ. ಹೀಗಾಗಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಭಾರತಕ್ಕೆ ಡಿಸ್ಕೌಂಟ್ ದರದಲ್ಲಿ ರಷ್ಯಾ ತೈಲ ಸಿಗುವಂತಾಗಿದೆ. ಭಾರತದಲ್ಲಿ ಹಣದುಬ್ಬರದ ಮೇಲೆ ಕಚ್ಚಾ ತೈಲ ದರ ನೇರ ಪ್ರಭಾವ ಬೀರುತ್ತದೆ. ಭಾರತದಲ್ಲಿ ತೈಲ ಸಂಸ್ಕರಣೆ ಆಗುತ್ತದೆಯೇ ವಿನಾ, ಇಲ್ಲಿಯೇ ಉತ್ಪಾದನೆ ಅತ್ಯಂತ ಸೀಮಿತವಾಗಿರುವುದು ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Ola Electric: 2 ಕೋಟಿ ಲೀಟರ್ ಪೆಟ್ರೋಲ್ ಉಳಿತಾಯ ಮಾಡಿದ ಓಲಾ! ಹೇಗೆ ತಿಳಿದುಕೊಳ್ಳಬೇಕಾ?