ನವ ದೆಹಲಿ: ಭಾರತ ಮತ್ತು ಇರಾಕ್ ತೈಲದಿಂದಾಚೆಗೂ ಇತರ ವಲಯಗಳಲ್ಲಿ ವ್ಯಾಪಾರ, ವಹಿವಾಟನ್ನು ಹೆಚ್ಚಿಸಲು ಉದ್ದೇಶಿಸಿವೆ. ಆರ್ಥಿಕ ಸಹಭಾಗಿತ್ವ ಮತ್ತು ತಂತ್ರಜ್ಞಾನಗಳ ವಿಚಾರದಲ್ಲಿಯೂ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆದಿದೆ. ಬಾಗ್ದಾದ್‌ನಲ್ಲಿ ಉಭಯ ದೇಶಗಳ ವಿದೇಶಾಂಗಮಟ್ಟದ ಕಚೇರಿ ಮಟ್ಟದಲ್ಲಿ (India-Iraq trade) ಎರಡನೇ ಸುತ್ತಿನ ಮಾತುಕತೆ ನಡೆದಿದೆ. ಭಾರತೀಯ ನಿಯೋಗದ ನೇತೃತ್ವವನ್ನು ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಔಸುಫ್ ಸಯೀದ್ ಹಾಗೂ ಇರಾಕ್ ನಿಯೋಗದ ನೇತೃತ್ವವನ್ನು ಹಿಶಾಮ್ ಅಲ್ವಾಯಿ ವಹಿಸಿದ್ದರು.
ಉಭಯ ಬಣಗಳು ಸೌಹಾರ್ದಯುತ ಹಾಗೂ ಸಾಂಪ್ರದಾಯಿಕ ಬಾಂಧವ್ಯವನ್ನು ಸ್ಮರಿಸಿವೆ. ಜತೆಗೆ ಆರ್ಥಿಕತೆ, ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ಅಭಿವೃದ್ಧಿ ವಿಚಾರಗಳಲ್ಲಿ ಪಾಲುದಾರಿಕೆಗೆ ಮುಂದಿನ ಹಂತದ ಮಾತುಕತೆ ನಡೆಸಲು ನಿರ್ಧರಿಸಿವೆ. ತೈಲ, ಅನಿಲ, ಮೂಲಸೌಕರ್ಯ, ಆರೋಗ್ಯ, ವಿದ್ಯುತ್, ಸಾರಿಗೆ, ಕೃಷಿ, ಜಲ ನಿರ್ವಹಣೆ, ಔಷಧ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗೆ ಎರಡೂ ದೇಶಗಳು ಮುಂದಾಗಿವೆ.
ಕಳೆದ 2021-22ರಲ್ಲಿ 34 ಶತಕೋಟಿ ಡಾಲರ್ ಮೌಲ್ಯದ (ಅಂದಾಜು 2.78 ಲಕ್ಷ ಕೋಟಿ ರೂ.) ಮೌಲ್ಯದ ದ್ವಿಪಕ್ಷೀಯ ವಹಿವಾಟನ್ನು ಉಭಯ ರಾಷ್ಟ್ರಗಳು ನಡೆಸಿವೆ.