ನವ ದೆಹಲಿ: ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಮೂನ್‌ಲೈಟಿಂಗ್ ವಿರುದ್ಧ ಎಚ್ಚರಿಕೆ ನೀಡಿದ್ದು, ಭಾರತಕ್ಕೆ ಪ್ರಾಮಾಣಿಕತೆಯ ಸಂಸ್ಕೃತಿ ಬೇಕು. ಯಾವುದೇ ಪಕ್ಷಪಾತ ಇರಕೂಡದು. ಯುವಜನತೆ ಮೂನ್‌ಲೈಟಿಂಗ್ ಅಥವಾ ವರ್ಕ್ ಫ್ರಮ್ ಹೋಮ್ ಬೇಕೇಬೇಕು ಎಂದು ಒತ್ತಾಯ ಮಾಡಬಾರದು. ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಆಲಸ್ಯ ಬಿಡಬೇಕು ಎಂದು ಹೇಳಿದ್ದಾರೆ.
ನಾನು ಮೂನ್‌ಲೈಟ್ ಮಾಡಬಲ್ಲೆ, ವರ್ಕ್ ಫ್ರಮ್ ಹೋಮ್ ಬೇಕು, ವಾರದಲ್ಲಿ ಮೂರು ದಿನ ಮಾತ್ರ ಆಫೀಸ್‌ಗೆ ಬರುತ್ತೇನೆ ಎಂಬಿತ್ಯಾದಿ ಬಲೆಗೆ ಯುವಜನತೆ ಬೀಳಬಾರದು. ಪ್ರಾಮಾಣಿಕತೆಯಿಂದ ಪರಿಶ್ರಮಪಟ್ಟು ಕೆಲಸ ಮಾಡಬೇಕು ಎಂದು ಮೂರ್ತಿ ಏಷ್ಯಾ ಎಕನಾಮಿಕ್ ಡೈಲಾಗ್ ಕಾರ್ಯಕ್ರಮದಲ್ಲಿ ವಿವರಿಸಿದರು. ವಿದೇಶಾಂಗ ಇಲಾಖೆ ದಿಲ್ಲಿಯಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು. ಮೂನ್‌ಲೈಟಿಂಗ್ ಎಂದರೆ ಒಂದು ಕಂಪನಿಯಲ್ಲಿ ಪೂರ್ಣ ಪ್ರಮಾಣದ ಉದ್ಯೋಗಿಯಾಗಿದ್ದುಕೊಂಡೇ ಮತ್ತೊಂದು ಕಂಪನಿಯಲ್ಲೂ ಕೆಲಸ ಮಾಡುವುದು.
ಭಾರತದಲ್ಲಿ ಕಠಿಣ ಪರಿಶ್ರಮದ ಕೊರತೆ:
ಭಾರತ ಮತ್ತು ಚೀನಾ 1940ರಲ್ಲಿ ಸಮಾನ ಜನಸಂಖ್ಯೆಯಲ್ಲಿತ್ತು. ಆದರೆ ಭಾರತಕ್ಕಿಂತ ಆರು ಪಟ್ಟು ಬೆಳೆದಿದೆ. ಇದಕ್ಕೆ ಕಾರಣ ಭಾರತೀಯರಲ್ಲಿ ಕಠಿಣ ಪರಿಶ್ರಮ ಪಡುವ ಸ್ವಭಾವ ಕಡಿಮೆಯಾಗಿ ಇರುವುದೇ ಆಗಿದೆ ಎಂದು ನಾರಾಯಣಮೂರ್ತಿ ವಿವರಿಸಿದರು. ಭಾರತದಲ್ಲಿ ಕಠಿಣ ಪರಿಶ್ರಮಿಗಳ ಸಂಖ್ಯೆ ಬಹಳ ಕಡಿಮೆ. ಆದರೆ ಪರಿಶ್ರಮ, ಶಿಸ್ತು, ಶ್ರದ್ಧೆಯ ಸಂಸ್ಕೃತಿ ವ್ಯಾಪಕವಾಗಬೇಕು ಎಂದು ನಾರಾಯಣಮೂರ್ತಿ ತಿಳಿಸಿದರು.
ಚೀನಾದ ಶಾಂಘೈನಲ್ಲಿ ಸ್ಥಳವನ್ನು ಆಯ್ಕೆ ಮಾಡಿದ ಮರು ದಿನವೇ 25 ಎಕರೆ ಜಾಗವನ್ನು ಅಲ್ಲಿನ ಮೇಯರ್ ಇನ್ಫೋಸಿಸ್‌ಗೆ ನೀಡಿದ್ದರು. ಆದರೆ ಭಾರತದಲ್ಲಿ ಈ ರೀತಿಯ ಚಲನಶೀಲತೆಗೆ ಕೊರತೆ ಇದೆ. ಭಾರತದಲ್ಲಿ ಉದ್ಯಮಿಸ್ನೇಹಿ ವಾತಾವರಣಕ್ಕೆ ಪೂರಕವಾಗಿ ತ್ವರಿತ ನಿರ್ಧಾರ, ತ್ವರಿತ ಅನುಷ್ಠಾನ, ಯಾವುದೇ ತೊಂದರೆ, ಅನಗತ್ಯ ಅಡಚಣೆಗಳು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದರು.