ಹೊಸದಿಲ್ಲಿ: ಭಾರತದ ಆರ್ಥಿಕ ಪರಿಸ್ಥಿತಿ ಶ್ರೀಲಂಕಾ ಅಥವಾ ಪಾಕಿಸ್ತಾನದ ಮಾದರಿಯಲ್ಲಿ ಪತನವಾಗದು. ಆದರೆ ನಿಶ್ಚಿತವಾಗಿಯೂ ಸವಾಲುಗಳು ಇವೆ ಮತ್ತು ಇದಕ್ಕೆ ಬಡ್ಡಿ ದರ ಹೆಚ್ಚಳ ಪರಿಹಾರವಲ್ಲ ಎಂದು ಹಿರಿಯ ಆರ್ಥಿಕ ತಜ್ಞ ಸ್ವಾಮಿನಾಥನ್ ಅಯ್ಯರ್ ತಿಳಿಸಿದ್ದಾರೆ.
ಜಗತ್ತು ಎರಡು ಬಗೆಯ ಸವಾಲನ್ನು ಎದುರಿಸುತ್ತಿದೆ. ಮೊದಲನೆಯದಾಗಿ ಆರ್ಥಿಕ ಹಿಂಜರಿತದ ಪ್ರವೃತ್ತಿ ಕಾಣಿಸಿಕೊಂಡಿದೆ. ಇದೇ ಸಂದರ್ಭ ದರಗಳು ಏರಿಕೆಯಾಗುತ್ತಿವೆ. ವಿಶ್ವಾದ್ಯಂತ ಸೆಂಟ್ರಲ್ ಬ್ಯಾಂಕ್‌ಗಳು ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ವಾಮಿನಾಥನ್ ಅಯ್ಯರ್ ಹೇಳಿದ್ದಾರೆ.
ಬೆಲೆ ಏರಿಕೆ ಸಾರ್ವತ್ರಿಕ
ಭಾರತದಲ್ಲಿ ಇತ್ತೀಚಿನ ವರ್ಚಗಳಲ್ಲೇ ಗರಿಷ್ಠ ಹಣದುಬ್ಬರ ಉಂಟಾಗಿದೆ. ಸಗಟು ಹಣದುಬ್ಬರ ಏಪ್ರಿಲ್‌ನಲ್ಲಿ ಶೇ.15.05ಕ್ಕೆ ಜಿಗಿದಿದೆ. ಚಿಲ್ಲರೆ ಹಣದುಬ್ಬರ ಶೇ.7.8ರಷ್ಟಿದೆ. ಇದು ಅಸಾಧಾರಣ ಮಟ್ಟದ ಹಣದುಬ್ಬರವಾಗಿದ್ದು, ಇಂಥ ಬೆಲೆ ಏರಿಕೆ ಭಾರತಕ್ಕೆ ಮಾತ್ರ ಸೀಮಿತವಲ್ಲ. ಅಮೆರಿಕದಲ್ಲಿ ಸುರಕ್ಷಿತ ಮಟ್ಟದ ಹಣದುಬ್ಬರ ಶೇ.2 ಇರಬೇಕಿತ್ತು. ಆದರೆ ಈಗ ಶೇ.8.5ಕ್ಕೆ ಏರಿಕೆಯಾಗಿದೆ.
2021ರಿಂದ ಶುರುವಾದ ಹಣದುಬ್ಬರ
ಸರಕುಗಳು, ಸೇವೆಗಳು, ಉತ್ಪನ್ನಗಳ ದರಗಳು ಕಳೆದ 12 ತಿಂಗಳುಗಳಲ್ಲಿ ಏರಿಕೆಯಾಗಿದೆ. 2021ರಲ್ಲೇ ಹಣದುಬ್ಬರ ಆರಂಭವಾಗಿತ್ತು. ರಷ್ಯಾ-ಉಕ್ರೇನ್ ಸಂಘರ್ಷ ಇದನ್ನು ಉಲ್ಬಣಿಸಿದೆ. ಜಗತ್ತು ಹಣದುಬ್ಬರ ಬಲೆಗೆ ಸಿಲುಕಿದೆ. ಹಲವು ಸರಕುಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಕೊರತೆ ಉಂಟಾಗಿದೆ. ಯುದ್ಧದ ಆಘಾತ, ರಷ್ಯಾ ವಿರುದ್ಧದ ನಿರ್ಬಂಧಗಳು ಪರಿಸ್ಥಿತಿಯನ್ನು ಬಿಗಡಾಯಿಸಿದೆ. ಏಕೆಂದರೆ ರಷ್ಯಾ ಹಲವಾರು ವಸ್ತುಗಳ ಪೂರೈಕೆಯಲ್ಲಿ ನಿರ್ಣಾಯಕವಾಗಿದೆ. ರಷ್ಯಾ ಮತ್ತು ಉಕ್ರೇನ್‌ನಿಂದ ಸರಕುಗಳ ಪೂರೈಕೆಯಾಗುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿರುವ ಕಪ್ಪು ಸಮುದ್ರದ ಮಾರ್ಗ (black sea) ಯುದ್ಧದ ಪರಿಣಾಮ ಬಂದ್ ಆಗಿದೆ.
ಮತ್ತೊಂದು ಕಡೆ ಚೀನಾ ಕೋವಿಡ್-19 ಅನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬೇಕು ಎಂದುಕೊಂಡು ಕಠಿಣ ಲಾಕ್‌ಡೌನ್ ಅನ್ನು ಹೇರಿಕೊಂಡು ಒಂದು ಬಗೆಯ ಹರ-ಕಿರಿ ಮಾಡಿಕೊಂಡಿದೆ. ಹೀಗಾಗಿ ಚೀನಾದಲ್ಲಿ ಉತ್ಪಾದನೆ ಕುಸಿಯುತ್ತಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಪೂರೈಕೆಯ ಕೊರತೆ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ನಾವು ಒಂದು ಕಡೆ ಬೇಡಿಕೆಯ ಕುಸಿತದ ಪರಿಣಾಮ ಆರ್ಥಿಕ ಹಿಂಜರಿತದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇದೇ ಸಂದರ್ಭ ದರಗಳು ಏರುತ್ತಿವೆ.
ಲಂಕಾದಂತೆ ಭಾರತ ಪತನವಾಗದು
ಇತರ ದೇಶಗಳನ್ನು ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ. ವಿಶ್ವ ಬ್ಯಾಂಕ್, ಐಎಂಎಫ್ ವರದಿಗಳ ಪ್ರಕಾರ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ರಾಷ್ಟ್ರ. ಹೀಗಿದ್ದರೂ ಈ ಹಿಂದೆ ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇ.9ರ ಪ್ರಮಾಣದಲ್ಲಿ ಅಂದಾಜಿಸಲಾಗಿತ್ತು. ಈಗ ಶೇ.7-ಶೇ.6ರ ಆಸುಪಾಸಿಗೆ ಇಳಿಯಬಹುದು ಎಂದು ಭಾವಿಸಲಾಗಿದೆ. ಆದರೆ ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಸಾಧ್ಯತೆ ಜಗತ್ತನ್ನು ಆವರಿಸಿದ್ದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಿದ್ದರೂ, ಶ್ರೀಲಂಕಾ ಅಥವಾ ಪಾಕಿಸ್ತಾನದ ರೀತಿ ಭಾರತದ ಆರ್ಥಿಕತೆ ಕುಸಿಯದು.
ಬಡ್ಡಿ ದರ ಹೆಚ್ಚಳ ಪರಿಹಾರವಲ್ಲ
ಬಡ್ಡಿ ದರವನ್ನು ಹೆಚ್ಚಿಸುವುದರಿಂದ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳು, ಸೇವೆಗಳನ್ನು ಪೂರೈಸುವ ಕಡೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಬೇಡಿಕೆ ಮಿತಿ ಮೀರಿದ್ದರೆ ಮಾತ್ರ ಬಡ್ಡಿ ದರಗಳನ್ನು ಹೆಚ್ಚಿಸಬಹುದು. ಭಾರತದಲ್ಲಿ ಮಿತಿ ಮೀರಿದ ಬೇಡಿಕೆಯ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದ್ದರಿಂದ ಬಡ್ಡಿ ದರ ಹೆಚ್ಚಿಸಿದರೆ ಬೇಡಿಕೆಯೂ ಕಡಿಮೆಯಾಗಲಿದೆ, ಉತ್ಪಾದನೆಯೂ ಕುಂಠಿತವಾಗಲಿದೆ. ಬಡ್ಡಿ ದರ ಇಳಿದರೂ ಲೋಹಗಳ ಕೊರತೆಯಂಥ ಸಮಸ್ಯೆ ಬಗೆಹರಿಯದು. ಈ ಸಂದರ್ಭದಲ್ಲಿ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವುದು, ವಿದೇಶಿ ವಿನಿಮಯ ಸಂಗ್ರಹವನ್ನು ಸಂರಕ್ಷಿಸುವುದು ನಿರ್ಣಾಯಕ. ಇದಕ್ಕೆ ಸಾಕಷ್ಟು ಕಾಲಾವಕಾಶವೂ ಅಗತ್ಯ. ಯುದ್ಧಕ್ಕೆ ತಕ್ಷಣದ ಪರಿಹಾರ ಕಾಣುತ್ತಿಲ್ಲವಾದ್ದರಿಂದ ಹಣದುಬ್ಬರದ ಪರಿಸ್ಥಿತಿ ಎದುರಿಸುವುದು ಅನಿವಾರ್ಯ ಎನ್ನುತ್ತಾರೆ ಸ್ವಾಮಿನಾಥನ್ ಅಯ್ಯರ್.
ಇದನ್ನೂ ಓದಿ: ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿ ದರ ಏರಿಕೆ ಮಂತ್ರ