ನವ ದೆಹಲಿ: ಭಾರತವು ರಷ್ಯಾಕ್ಕೆ ಔಷಧ, ಕಾರು, ಜವಳಿ, ಆಹಾರೋತ್ಪನ್ನ, ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವ ಪ್ರಮುಖ ದೇಶಗಳ ಪೈಕಿ ( India -Russia trade) ಒಂದಾಗಿದೆ. ಸೈಂಟ್ ಪೀಟರ್ಸ್‌ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಮ್‌ನ ನಿರ್ದೇಶಕ ಅಲೆಕ್ಸಿ ವಾಲ್ಕೋವ್ ಈ ವಿಷಯ ತಿಳಿಸಿದ್ದಾರೆ. ಭಾರತ-ರಷ್ಯಾದ ಉದ್ಯಮಿಗಳ ಸಮಾವೇಶವನ್ನು ದಿಲ್ಲಿಯಲ್ಲಿ ಆಯೋಜಿಸಲಾಗಿದೆ.
ಉಭಯ ದೇಶಗಳ ಬಿಸಿನೆಸ್ 2022-23ರಲ್ಲಿ 39.8 ಶತಕೋಟಿ ಡಾಲರ್‌ಗೆ (ಅಂದಾಜು 3.26 ಲಕ್ಷ ಕೋಟಿ ರೂ.) ಏರಿಕೆಯಾಗಿದೆ ಎಂದು ವಾಲ್ಕೋವ್ ತಿಳಿಸಿದ್ದಾರೆ. ಭಾರತವು ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲವನ್ನು ಪಡೆಯುತ್ತದೆ.
ರಷ್ಯಾ ಭಾರತದ ಜತೆಗೆ ಪರಿಷ್ಕೃತ ವಿದೇಶಾಂಗ ನೀತಿಯನ್ನು ಅನುಸರಿಸಲು ಮುಂದಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ಶುಕ್ರವಾರ ಒಪ್ಪಿದ್ದಾರೆ. ಭಾರತದ ಜತೆಗೆ ರಷ್ಯಾ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಒಂದು ವರ್ಷದಲ್ಲಿ ಭಾರತ-ರಷ್ಯಾ ವ್ಯಾಪಾರ ಹೊಸ ಎತ್ತರಕ್ಕೇರಿದೆ. ಮುಖ್ಯವಾಗಿ ಕಚ್ಚಾ ತೈಲವನ್ನು ಭಾರತಕ್ಕೆ ರಫ್ತು ಮಾಡುವ ಪ್ರಮುಖ ರಾಷ್ಟ್ರವಾಗಿ ರಷ್ಯಾ ಹೊರಹೊಮ್ಮಿದೆ. ಭಾರತದಿಂದ ಔಷಧ ಮತ್ತು ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿಕೊಳ್ಳಲು ರಷ್ಯಾ ನಿರ್ಧರಿಸಿದೆ. ಮಾಹಿತಿ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ತಂತ್ರಜ್ಞಾನ ಸಾವರ್ನಿಟಿ, ಸ್ಮಾರ್ಟ್ ಸಿಟಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಆರೋಗ್ಯ, ಔಷಧ ವಲಯದಲ್ಲಿ ವಹಿವಾಟನ್ನು ಹೆಚ್ಚಿಸಲು ಮಾತುಕತೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.