ನವ ದೆಹಲಿ : ಭಾರತ 2029ರ ವೇಳೆಗೆ ಜಗತ್ತಿನ ೩ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ (Economy) ಹೊರಹೊಮ್ಮಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಂಶೋಧನಾ ವರದಿ ತಿಳಿಸಿದೆ.
ಕಳೆದ ಎಂಟು ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ರಚನಾತ್ಮಕ ಬದಲಾವಣೆಯಾಗಿದೆ. ಪ್ರಸ್ತುತ ಬ್ರಿಟನ್ ಅನ್ನು ಹಿಂದಿಕ್ಕಿ 5ನೇ ಅತಿ ದೊಡ್ಡ ಎಕಾನಮಿಯಾಗಿದೆ. ಈಗಿನ ಬೆಳವಣಿಗೆಯ ಪ್ರಮಾಣದಲ್ಲಿ ಮುಂದುವರಿದರೆ 2027ರಲ್ಲಿ ಜರ್ಮನಿಯನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಲಿದೆ. 2029ರಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಮೂರನ ಸ್ಥಾನಕ್ಕೇರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿ ತಿಳಿಸಿದೆ.
2014ರಿಂದೀಚೆಗೆ ಭಾರತ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳ ಪರಿಣಾಮವಾಗಿ 2029ರ ವೇಳೆಗೆ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಇದು ಐತಿಹಾಸಿಕ ಸಾಧನೆಯಾಗಲಿದೆ ಎಂದು ಎಸ್‌ಬಿಐನ ಮುಖ್ಯ ಆರ್ಥಿಕ ತಜ್ಞ ಸೌಮ್ಯ ಕಾಂತಿ ಘೋಷ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಪ್ರಕಾರ 2021 ರ ಕೊನೆಯ ಮೂರು ತಿಂಗಳಿನಲ್ಲಿ ಭಾರತವು ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ತಲುಪಿದೆ. 2022-23ರ ಮೊದಲ ತ್ರೈಮಾಸಿಕದಲ್ಲಿ, ಅಂದರೆ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ 13.5% ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿತ್ತು. 2022-23ರಲ್ಲಿ ಭಾರತ ವಾರ್ಷಿಕ 6.7 % ಜಿಡಿಪಿ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ. ಜಿಡಿಪಿ ಬೆಳವಣಿಗೆ ಉತ್ತಮ ಸ್ಥಿತಿಯಲ್ಲಿದ್ದರೆ ತಲಾ ಆದಾಯ ಕೂಡ ಏರಿಕೆಯಾಗಲಿದೆ.
ಇದನ್ನೂ ಓದಿ: Economy | ಜಾಗತಿಕ ಆರ್ಥಿಕತೆಯಲ್ಲಿ ಬ್ರಿಟನ್‌ಅನ್ನೇ ಹಿಂದಿಕ್ಕಿದ ಭಾರತ, ಆರನೇ ಸ್ಥಾನಕ್ಕೆ ಕುಸಿದ ಲಂಡನ್