ನವದೆಹಲಿ: ರಷ್ಯಾದಿಂದ ತನ್ನ ಕಚ್ಚಾ ತೈಲ ಆಮದನ್ನು ಎರಡು ಪಟ್ಟು ಹೆಚ್ಚಿಸಲು ಭಾರತ ಮಾತುಕತೆಗೆ ಮುಂದಾಗಿದೆ. ಇದು ಫಲಪ್ರದವಾದರೆ ಪೆಟ್ರೋಲ್, ಡೀಸೆಲ್ ದರ ಇಳಿಯುವ ಸಾಧ್ಯತೆ ಇದೆ.
ರಷ್ಯಾದ ಸಾರ್ವಜನಿಕ ವಲಯದ ರೋಸ್ನೆಫ್ಟ್ ತೈಲ ಕಂಪನಿಯಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಪಡೆಯಲು ಭಾರತದ ತೈಲ ಕಂಪನಿಗಳು ಉತ್ಸುಕವಾಗಿವೆ. ರಷ್ಯಾವು ಉಕ್ರೇನ್ ವಿರುದ್ಧ ದಾಳಿ ನಡೆಸಿರುವುದರಿಂದ ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳನ್ನು ಎದುರಿಸುತ್ತಿದೆ. ಹೀಗಾಗಿ ರಷ್ಯಾ ಕೂಡ ಭಾರತಕ್ಕೆ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲ ಪೂರೈಸಲು ಸಿದ್ಧವಿದೆ.
ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಜನಿಕ ತೈಲ ಕಂಪನಿಗಳು ರಷ್ಯಾದಿಂದ ಹೊಸತಾಗಿ 6 ತಿಂಗಳಿನ ಒಪ್ಪಂದ ಮಾಡಿಕೊಂಡು ಕಚ್ಚಾ ತೈಲ ಖರೀದಿಸಲು ಮುಂದಾಗಿವೆ. ಒಪ್ಪಂದದ ಪ್ರಕಾರ, ಹಡಗುಗಳಲ್ಲಿ ಸಾಗಣೆ ಮತ್ತು ವಿಮೆಯ ವಿಷಯನ್ನು ಮಾರಾಟಗಾರರೇ ವಹಿಸಿಕೊಳ್ಳಬೇಕಾಗುತ್ತದೆ. ಎಷ್ಟು ಪ್ರಮಾಣದಲ್ಲಿ ತೈಲ ಖರೀದಿ ನಡೆಯಲಿದೆ ಎಂಬುದು ಅಂತಿಮವಾಗಿಲ್ಲ. ರಷ್ಯಾದ ರೋಸ್‌ನೆಫ್ಟ್ ಮುಂತಾದ ಕಂಪನಿಗಳಿಂದ ನೇರವಾಗಿ ಖರೀದಿಸುವುದು ಲಾಭದಾಯಕ ಎನ್ನುತ್ತಾರೆ ತಜ್ಞರು.
ಕಳೆದ ಮೇನಲ್ಲಿ ರಷ್ಯಾದಿಂದ ದಿನಕ್ಕೆ 740,000 ಬ್ಯಾರೆಲ್ ಕಚ್ಚಾ ತೈಲ ಆಮದಾಗಿತ್ತು. ಏಪ್ರಿಲ್‌ನಲ್ಲಿ 284,000 ಬ್ಯಾರೆಲ್ ಮತ್ತು ಮಾರ್ಚ್‌ನಲ್ಲಿ 34,000 ಬ್ಯಾರೆಲ್ ಆಮದಾಗಿತ್ತು.