Site icon Vistara News

ಭಾರತದ 4 ಲಕ್ಷ ಕೋಟಿ ಡಾಲರ್ ಜಿಡಿಪಿ ಸುದ್ದಿ ಬೋಗಸ್! ಕಾಂಗ್ರೆಸ್ ಟೀಕೆ

Jairam Ramesh

ನವದೆಹಲಿ: ಭಾರತದ ನಾಮಿನಲ್ ಜಿಡಿಪಿ (Indian GDP) 4 ಲಕ್ಷ ಕೋಟಿ ಡಾಲರ್ ದಾಟಿದೆ ಎಂಬ ಐಎಂಎಫ್‌ ಡೇಟಾ ಲೈವ್ ಚಾರ್ಟ್ (IMF Data Live Chart) ಹಂಚಿಕೊಂಡಿದ್ದ ಬಿಜೆಪಿ ನಾಯಕರನ್ನು (BJP Leaders) ಕಾಂಗ್ರೆಸ್ ಗೇಲಿ ಮಾಡಿದೆ(Congress Party). ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಎಂದು ಘೋಷಿಸಿದ ಬಿಜೆಪಿಯನ್ನು ಸೋಮವಾರ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಸಂಭ್ರಮವನ್ನು ಹುಟ್ಟು ಹಾಕಲು ಬೋಗಸ್ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ ಮತ್ತು ಆ ಮೂಲಕ ಹೆಡ್‌ಲೈನ್ ಮ್ಯಾನೇಜ್‌ಮೆಂಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕೆಲವು ಕೇಂದ್ರ ಸಚಿವರು ಹಾಗೂ ಮಹಾರಾಷ್ಟ್ರ ಡೆಪ್ಯುಟಿ ಸಿಎಂ ದೇವೇಂದ್ರ ಫಡ್ನವಿಸ್ ಅವರು, ಭಾರತವು 4 ಲಕ್ಷ ಕೋಟಿ ಡಾಲರ್ ಜಿಡಿಪಿ ದಾಟಿದೆ ಎಂದು ಸುಳ್ಳು ಹೇಳಿದ್ದಾರೆಂದು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ 2:45 ರಿಂದ 6:45 ರ ನಡುವೆ ರಾಷ್ಟ್ರವು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಮಗ್ನವಾಗಿರುವಾಗ ರಾಜಸ್ಥಾನ ಮತ್ತು ತೆಲಂಗಾಣದ ಹಿರಿಯ ಕೇಂದ್ರ ಸಚಿವರು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸೇರಿದಂತೆ ಮೋದಿ ಸರ್ಕಾರದ ವಿವಿಧ ನಾಯಕರು, ಪ್ರಧಾನಿಯವರ ಅತ್ಯಂತ ಒಲವುಳ್ಳ ಉದ್ಯಮಿ(ಗೌತಮ್ ಅದಾನಿ) ನಿನ್ನೆಯೇ ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಎಂದು ಟ್ವೀಟ್ ಮಾಡಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

ಇದು ಸಂಪೂರ್ಣವಾಗಿ ನಕಲಿ ಮತ್ತು ಸುಳ್ಳು ಸುದ್ದಿಯಾಗಿದ್ದು, ಹುಸಿ ಸಂಭ್ರಮವನ್ನು ಉಂಟುಮಾಡಲು ಹಂಚಿಕೊಳ್ಳಲಾಗಿದೆ. ಆ ಮೂಲಕ ಹೆಡ್‌ಲೈನ್ ಮ್ಯಾಮೇಜ್ಮೆಂಟ್ ಮತ್ತು ಮತ್ತು ಸೈಕೋಫ್ಯಾನ್ಸಿಯ ಕರುಣಾಜನಕ ಪ್ರಯತ್ನವಾಗದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.

4 ಲಕ್ಷ ಕೋಟಿ ಟ್ರಿಲಿಯನ್ ಡಾಲರ್ ಜಿಡಿಪಿ ಆಗಿಲ್ಲವೇ?

ಕೆಲವು ಉನ್ನತ ಮೂಲಗಳ ಪ್ರಕಾರ ಭಾರತವು 4 ಲಕ್ಷ ಕೋಟಿ ಡಾಲರ್ ಜಿಡಿಪಿ ಗಡಿಯನ್ನು ದಾಟಿಲ್ಲ. ಈ ಸುದ್ದಿ ತಪ್ಪು ಮಾಹಿತಿಯಿಂದ ಕೂಡಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಡೇಟಾ ಆಧರಿಸಿ ಎಲ್ಲಾ ದೇಶಗಳಿಗೆ ಲೈವ್-ಟ್ರ್ಯಾಕಿಂಗ್ ಜಿಡಿಪಿ ಫೀಡ್‌ನಿಂದ ಪರಿಶೀಲಿಸದ ಸ್ಕ್ರೀನ್ ಗ್ರ್ಯಾಬ್ ಅನ್ನು ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಆರ್ಥಿಕತೆಯ ವಿವಿಧ ವಲಯಗಳ ಸಂಖ್ಯೆಗಳು ಮಂದಗತಿಯಲ್ಲಿ ಲಭ್ಯವಿರುವುದರಿಂದ ಎಲ್ಲಾ ದೇಶಗಳ ಜಿಡಿಪಿ ಅಂಕಿಅಂಶಗಳ ಲೈವ್ ಟ್ರ್ಯಾಕಿಂಗ್ ಹೊಂದಲು ತುಂಬಾ ಕಷ್ಟ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಬಿಜೆಪಿ ನಾಯಕರು ಹೇಳಿದ್ದೇನು?

ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು, ಜಾಗತಿಕ ವೇದಿಕೆಯಲ್ಲಿ ಭಾರತದ ಮಹತ್ವದ ಪಾತ್ರ ಎಂದು ಟ್ವೀಟ್ ಮಾಡಿದ್ದಾರೆ. ಭಾರತವು ಜಿಡಿಪಿಯಲ್ಲಿ 4 ಟ್ರಿಲಿಯನ್ ದಾಟುವ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಇದು ನಮ್ಮ ಜಾಗತಿಕ ಉಪಸ್ಥಿತಿಯಲ್ಲಿ ಮಹತ್ವದ ಕ್ಷಣವನ್ನು ಗುರುತಿಸುತ್ತದೆ. ಪಿಎಂ ಮೋದಿಯವರ ನಾಯಕತ್ವವು ಭಾರತವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಇದು ಕ್ರಿಯಾತ್ಮಕ, ದೂರದೃಷ್ಟಿಯ ನಾಯಕತ್ವ ಫಲದಂತೆ ತೋರುತ್ತದೆ ಎಂದು ಹೇಳಿಕೊಂಡಿದ್ದಾರೆ. ನಮ್ಮ ರಾಷ್ಟ್ರವು 4 ಟ್ರಿಲಿಯನ್ ಜಿಡಿಪಿ ಮೈಲಿಗಲ್ಲನ್ನು ದಾಟುತ್ತಿರುವಂತೆ ನನ್ನ ಸಹ ಭಾರತೀಯರಿಗೆ ಅಭಿನಂದನೆಗಳು! ನಿಮಗೆ ಹೆಚ್ಚಿನ ಶಕ್ತಿ, ನಿಮಗೆ ಹೆಚ್ಚು ಗೌರವ ಪ್ರಧಾನಿ ಮೋದಿ ಎಂದು ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು, ಜಿಡಿಪಿಯು ಮೊದಲ ಬಾರಿಗೆ 4 ಟ್ರಿಲಿಯನ್‌ಗೆ ತಲುಪಿ, ಮುಂದೆ ಸಾಗುತ್ತಿದೆ. ಅಭಿನಂದನೆಗಳು. 5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದ್ದು, ಇದು ಮೋದಿ ಅವರ ಗ್ಯಾರಂಟಿ ಎಂದು ಟ್ವೀಟ್ ಮಾಡಿದ್ದಾರೆ.

ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಡಿ ಪುರಂದೇಶ್ವರಿ ಅವರು ಟ್ವೀಟ್ ಮಾಡಿ, 4 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿದ್ದಕ್ಕೆ ಅಭಿನಂದನೆಗಳು ಭಾರತ್. ಕಳೆದ 9.5 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಪರಿಚಯಿಸಿದ ಮತ್ತು ಜಾರಿಗೆ ತಂದ ಅದ್ಭುತ ಸುಧಾರಣೆಗಳಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಜಗತ್ತಿನಲ್ಲೇ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಲು ಇನ್ನು ಕೇವಲ ಎರಡು ವರ್ಷಗಳು ಸಾಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: 4 ಟ್ರಿಲಿಯನ್ ಡಾಲರ್ ಜಿಡಿಪಿ; ಭಾರತದ ಅಭಿವೃದ್ಧಿಯ ದ್ಯೋತಕ

Exit mobile version