Site icon Vistara News

G20 FMCBG Meeting : ಭಾರತೀಯ ಗ್ರಾಹಕರು, ಉದ್ಯಮಿಗಳಿಗೆ ಭವಿಷ್ಯದ ಬಗ್ಗೆ ವಿಶ್ವಾಸ : ಪ್ರಧಾನಿ ಮೋದಿ

modi

ಬೆಂಗಳೂರು: ಜಿ20 ಶೃಂಗದ ಅಧ್ಯಕ್ಷತೆ ವಹಿಸಿರುವ ಭಾರತ, ಒಕ್ಕೂಟದ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ಗಳ (FMCBG) ಮೊದಲ ಸಭೆಯನ್ನು ಶುಕ್ರವಾರ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. (G20 FMCBG Meeting) ಜಾಗತಿಕ ಆರ್ಥಿಕತೆಯ ಸ್ಥಿರತೆ ಮತ್ತು ವಿಶ್ವಾಸ ವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ. ಭಾರತದ ಗ್ರಾಹಕರು ಮತ್ತು ಉದ್ಯಮಿಗಳು ಭವಿಷ್ಯದ ಬಗ್ಗೆ ಆಶಾವಾದಿಗಳಾಗಿದ್ದಾರೆ ಎಂದು ಅವರು (G 20 Finance ministers and central bank governors meeting) ಹೇಳಿದರು.

ಬೆಂಗಳೂರಿನಲ್ಲಿ ಫೆ.24-25ರಂದು ಸಭೆ ನಡೆಯುತ್ತಿದ್ದು, ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅಧ್ಯಕ್ಷತೆ ವಹಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ನಾವು ಸುರಕ್ಷಿತ, ವಿಶ್ವಾಸಾರ್ಹ ಸಾರ್ವಜನಿಕ ಡಿಜಿಟಲ್‌ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಡಿಜಿಟಲ್‌ ಪೇಮೆಂಟ್‌ ಸಿಸ್ಟಮ್‌ ಆಡಳಿತ, ಹಣಕಾಸು ಸೇರ್ಪಡೆ, ಜನಜೀವನದ ಗುಣಮಟ್ಟವನ್ನು ಅನೂಹ್ಯವಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ಮೋದಿ ವರ್ಚುವಲ್‌ ಮೀಟಿಂಗ್‌ನಲ್ಲಿ ವಿವರಿಸಿದರು.

ಜಾಗತಿಕ ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲು ಜಗತ್ತಿನ ನಾನಾ ದೇಶಗಳು ಒಂದಾಗಿರುವ ರೀತಿಯಲ್ಲಿ, ಆರ್ಥಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಬ್ಯಾಂಕ್‌ಗಳು ಸಂಘಟಿತವಾಗಿ ಯತ್ನಿಸಬೇಕು ಎಂದರು. ಕೋವಿಡ್-‌19 ಬಿಕ್ಕಟ್ಟು ಜಾಗತಿಕ ಆರ್ಥಿಕತೆ ಮತ್ತು ಅಭಿವೃದ್ಧಿಶೀಲ ಎಕಾನಮಿಗಳಿಗೆ ಶತಮಾನಕ್ಕೊಮ್ಮೆ ಸಂಭವಿಸುವಂಥ ಭಾರಿ ಹೊಡೆತವನ್ನು ಕೊಟ್ಟಿದೆ. ಇದರ ಪ್ರತಿಕೂಲ ಪರಿಣಾಮಗಳನ್ನು ಈಗಲೂ ನಾವು ಎದುರಿಸುತ್ತಿದ್ದೇವೆ. ಬೆಲೆ ಏರಿಕೆ, ಇಂಧನ ಕೊರತೆ ಮುಂತಾದ ಸವಾಲುಗಳನ್ನು ನಾನಾ ದೇಶಗಳು ಹೊಂದಿವೆ. ಆದರೆ ಭಾರತದ ಗ್ರಾಹಕರು ಮತ್ತು ಬಿಸಿನೆಸ್‌ ಸಮುದಾಯ ಭವಿಷ್ಯದ ಬಗ್ಗೆ ವಿಶ್ವಾಸವನ್ನು ಹೊಂದಿದ್ದು, ಇದು ಜಾಗತಿಕ ಮಟ್ಟದಲ್ಲಿ ಕೂಡ ಅನುರಣಿಸಬೇಕಾಗಿದೆ ಎಂದು ಹೇಳಿದರು.

Exit mobile version