ವಿವಿಧ ನಾಣ್ಯ, ಮುಖಬೆಲೆಯ ನೋಟುಗಳನ್ನು (Indian Currency) ಮುದ್ರಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (Reserve Bank of India) ಇವುಗಳನ್ನು ಮುದ್ರಿಸಲು ಎಷ್ಟು ಖರ್ಚಾಗುತ್ತದೆ (Printing costs) ಎಂಬುದು ತಿಳಿದರೆ ಆಶ್ಚರ್ಯವಾಗಬಹುದು. ಕೆಲವು ನೋಟುಗಳ ಮುದ್ರಣ ವೆಚ್ಚ ತುಂಬಾ ದುಬಾರಿಯಾಗಿದೆ. ನೋಟ್ ಬ್ಯಾನ್ ಆದ ಬಳಿಕ ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ 2024ರ ಮೇ ತಿಂಗಳಲ್ಲಿ 2,000 ರೂ. ಮುಖ ಬೆಲೆಯ ನೋಟುಗಳನ್ನು ತೆಗೆದು ಹಾಕಿತ್ತು. ಇದರ ವಾಪಸಾತಿಗೆ ಅಕ್ಟೋಬರ್ 7ರವರೆಗೆ ಹೊಸ ಗಡುವು ವಿಧಿಸಿದೆ. ಅಂದರೆ ಅಲ್ಲಿಯವರೆಗೆ ಮಾತ್ರ 2,000 ರೂ.ನ ನೋಟುಗಳು ಕಾನೂನು ಮೂಲಕ ಮಾನ್ಯವಾಗಿರುತ್ತವೆ. ಆದರೆ ಚಲಾವಣೆ ಮಾಡಲಾಗುವುದಿಲ್ಲ.
ಯಾವುದಕ್ಕೆ ಎಷ್ಟು ವೆಚ್ಚ?
ಆರ್‌ಬಿಐ ಮುದ್ರಿಸುವ ವಿವಿಧ ಮುಖಬೆಲೆಯ ನೋಟುಗಳ ಮುದ್ರಣ ವೆಚ್ಚವು ಒಂದೇ ರೀತಿ ಇರುವುದಿಲ್ಲ. 2,000 ರೂಪಾಯಿ ಒಂದು ನೋಟು ಮುದ್ರಣಕ್ಕೆ ಸರಿಸುಮಾರು 4 ರೂಪಾಯಿ ವೆಚ್ಚವಾಗುತ್ತದೆ. 2018ರಲ್ಲಿ 2,000 ರೂಪಾಯಿ ನೋಟಿನ ಮುದ್ರಣದ ವೆಚ್ಚ 4.18 ರೂಪಾಯಿ ಆಗಿದ್ದು, ಅನಂತರ ಅದು 3.53 ರೂಪಾಯಿಗೆ ಇಳಿಕೆಯಾಯಿತು.
ಕುತೂಹಲಕಾರಿ ವಿಷಯವೆಂದರೆ ಸರಾಸರಿ ಮೌಲ್ಯ ತೆಗೆದುಕೊಂಡರೆ ಅತ್ಯಧಿಕ ಮುದ್ರಣ ವೆಚ್ಚವಾಗುವುದು 10 ರೂ. ನೋಟುಗಳಿಗೆ ಎಂದರೆ ಆಶ್ಚರ್ಯವಾಗಬಹುದು. 10 ರೂಪಾಯಿಯ 1,000 ನೋಟುಗಳನ್ನು ಮುದ್ರಿಸಲು 960 ರೂ. ವೆಚ್ಚವಾಗುತ್ತದೆ. ಅಂದರೆ ಹತ್ತು ರೂಪಾಯಿಯ ಒಂದು ನೋಟಿಗೆ 96 ಪೈಸೆ ವೆಚ್ಚವಾಗುತ್ತದೆ!
100 ರೂ. ಗಳ 1,000 ನೋಟುಗಳನ್ನು ಮುದ್ರಿಸಲು 1,770 ರೂ., 200 ರೂ. ಗಳ 1,000 ನೋಟುಗಳನ್ನು ಮುದ್ರಿಸಲು 2,370 ರೂ., 500 ರೂ.ಗಳ 1,000 ನೋಟುಗಳನ್ನು ಮುದ್ರಿಸಲು 2,290 ರೂ. ಖರ್ಚಾಗುತ್ತದೆ. 2,000 ರೂಪಾಯಿಗಳ 1000 ನೋಟುಗಳನ್ನು ಮುದ್ರಿಸುವ ವೆಚ್ಚವು ಈ ಕೆಲವು ಮುಖಬೆಲೆಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.
ಚಲಾವಣೆಯಲ್ಲಿದ್ದ 2,000 ರೂ. ನೋಟುಗಳು
ಆರ್‌ಬಿಐ ಪ್ರಕಾರ ಮೇ 19ರವರೆಗೆ ಚಲಾವಣೆಯಲ್ಲಿದ್ದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿ. ಇವುಗಳಲ್ಲಿ 3.42 ಲಕ್ಷ ಕೋಟಿ ರೂಪಾಯಿಗಳು ಬ್ಯಾಂಕ್‌ಗಳಿಗೆ ಮರಳಿದ್ದು ಸೆಪ್ಟೆಂಬರ್ 29 ರ ಹೊತ್ತಿಗೆ ಕೇವಲ 0.14 ಲಕ್ಷ ಕೋಟಿ ಚಲಾವಣೆಯಲ್ಲಿ ಉಳಿದಿದೆ. ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಆರಂಭಿಕ ಗಡುವು ಸೆಪ್ಟೆಂಬರ್ 30 ಆಗಿತ್ತು.
2023ರ ಮೇ 19ರಂತೆ ಚಲಾವಣೆಯಲ್ಲಿರುವ 2,000 ರೂಪಾಯಿಗಳ ಬ್ಯಾಂಕ್‌ನೋಟುಗಳಲ್ಲಿ ಶೇ. 96ರಷ್ಟನ್ನು ಹಿಂತಿರುಗಿಸಲಾಗಿದೆ. ಹೆಚ್ಚುವರಿಯಾಗಿ, ಅಕ್ಟೋಬರ್ 8 ರಿಂದ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ಬ್ಯಾಂಕ್ ನೋಟುಗಳನ್ನು ಠೇವಣಿ ಮಾಡುವ ಅಥವಾ ಬದಲಾಯಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗುವುದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್
2,000 ರೂಪಾಯಿಗಳ ನೋಟುಗಳನ್ನು 19 ಆರ್‌ಬಿಐ ಇಶ್ಯೂ ಆಫೀಸ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಒಂದು ಬಾರಿಗೆ 20,000 ರೂ. ಅನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ ಆರ್‌ಬಿಐ ಇಶ್ಯೂ ಆಫೀಸ್‌ಗಳಲ್ಲಿ 2,000 ರೂ ಬ್ಯಾಂಕ್‌ನೋಟುಗಳನ್ನು ತಮ್ಮ ಭಾರತೀಯ ಬ್ಯಾಂಕ್ ಖಾತೆಗಳಿಗೆ ಯಾವುದೇ ಮೊತ್ತಕ್ಕೆ ಜಮಾ ಮಾಡಬಹುದು. ಹೆಚ್ಚುವರಿಯಾಗಿ, ದೇಶದೊಳಗೆ ಇರುವ ವ್ಯಕ್ತಿಗಳು ಅಥವಾ ಘಟಕಗಳು ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು 19 ಆರ್‌ಬಿಐ ಇಶ್ಯೂ ಕಚೇರಿಗಳಿಗೆ ಯಾವುದಾದರೂ ಇಂಡಿಯಾ ಪೋಸ್ಟ್ ಮೂಲಕ 2,000 ರೂ . ಬ್ಯಾಂಕ್ ನೋಟುಗಳನ್ನು ಕಳುಹಿಸುವ ಆಯ್ಕೆಯನ್ನು ಹೊಂದಿವೆ.