ನವ ದೆಹಲಿ: ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಭಾರತದ ವಿದೇಶಿ ಸಾಲ (External debt ) 2022 ರ ಮಾರ್ಚ್ ಅಂತ್ಯದ ವೇಳೆಗೆ 620.7 ಶತಕೋಟಿ ಡಾಲರ್‌ಗೆ (ಅಂದಾಜು 49.46 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.
ಭಾರತದ ಬಾಹ್ಯ ಅಥವಾ ವಿದೇಶಿ ಸಾಲದ ಬಗ್ಗೆ ಹಣಕಾಸು ಸಚಿವಾಲಯವು ಸ್ಥಿತಿಗತಿ ಕುರಿತ ವರದಿಯನ್ನು ಬಿಡುಗಡೆಗೊಳಿಸಿದೆ. ಈ ಸಾಲದಲ್ಲಿ 53.2 % ಡಾಲರ್ ರೂಪದಲ್ಲಿ ಇದ್ದರೆ, 31.2% ರೂಪಾಯಿ ಲೆಕ್ಕದಲ್ಲಿದೆ. ಜಿಡಿಪಿಯ 19.9 % ಅನುಪಾತದಷ್ಟು ವಿದೇಶಿ ಸಾಲ ಇದೆ. ಹೀಗಿದ್ದರೂ, ವಿದೇಶಿ ಸಾಲದ ನಿರ್ವಹಣೆ ಉತ್ತಮ ರೀತಿಯಲ್ಲಿದೆ ಎಂದು ವರದಿ ತಿಳಿಸಿದೆ. ಭಾರತದ ವಿದೇಶಿ ಸಾಲದಲ್ಲಿ ಅರ್ಧಕ್ಕೂ ಹೆಚ್ಚಿನ ಪಾಲು ಡಾಲರ್ ರೂಪದಲ್ಲಿ, ಅಂದರೆ ಡಾಲರ್ ಬಾಂಡ್‌ಗಳ ಲೆಕ್ಕದಲ್ಲಿ ಇರುತ್ತದೆ. ಡಾಲರ್ ಬಾಂಡ್‌ಗಳ ಮೂಲಕ ವಿದೇಶಿ ಸಾಲ ಪಡೆಯಲಾಗುತ್ತದೆ. ಡಾಲರ್ ಬಾಂಡ್‌ಗಳು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತವೆ.
ಸಮೃದ್ಧ ವಿದೇಶಿ ವಿನಿಮಯ ಸಂಗ್ರಹದ ರಕ್ಷೆ: ಭಾರತದ ವಿದೇಶಿ ಸಾಲದ 97.8%ನಷ್ಟು ವಿದೇಶಿ ವಿನಿಮಯ ಸಂಗ್ರಹ ಇದೆ. ಕಳೆದ ವರ್ಷ ಸಾಲದ 100.6% ನಷ್ಟು ವಿದೇಶಿ ಕರೆನ್ಸಿ ಸಂಗ್ರಹ ಇತ್ತು. ಒಟ್ಟು ವಿದೇಶಿ ಸಾಲದಲ್ಲಿ 499 ಶತಕೋಟಿ ಡಾಲರ್ (39.42 ಲಕ್ಷ ಕೋಟಿ ರೂ.) ದೀರ್ಘಕಾಲೀನ ಸಾಲವಾಗಿದ್ದರೆ, 121 ಶತಕೋಟಿ ಡಾಲರ್ (೯.೫ ಲಕ್ಷ ಕೋಟಿ ರೂ.) ಅಲ್ಪಕಾಲೀನ ಸಾಲ ಆಗಿದೆ ಎಂದು ವರದಿ ತಿಳಿಸಿದೆ.
ಆರ್‌ಬಿಐ ಕ್ರಮದ ಫಲಿತಾಂಶ ಅಸ್ಪಷ್ಟ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದುಬ್ಬರವನ್ನು ತಗ್ಗಿಸಲು ರೆಪೊ ದರವನ್ನು ಇಳಿಸಿದ್ದರೂ, ಇದರ ಪರಿಣಾಮಗಳು ಅಸ್ಪಷ್ಟವಾಗಿವೆ. ಆರ್ಥಿಕ ಚಟುವಟಿಕೆಗಳು ಚುರುಕಾದರೆ ಹಣದುಬ್ಬರ 4%ಕ್ಕೆ ತಗ್ಗಬಹುದು. ಆದರೆ ಹಣದುಬ್ಬರ ತಗ್ಗಿಲ್ಲ ಎಂದಿದ್ದರೆ, ಎಕಾನಮಿ ಹೋರಾಟದ ಸ್ಥಿತಿಯಲ್ಲಿದೆ ಹಾಗೂ ಹಣದುಬ್ಬರ ಇಳಿಕೆ ನಿಧಾನವಾಗಿದೆ ಎನ್ನಬಹುದು ಎಂದು ಆರ್‌ಬಿಐ ಹಣಕಾಸು ಸಮಿತಿಯ ಸದಸ್ಯ ಜೆ.ಆರ್ ವರ್ಮಾ ತಿಳಿಸಿದ್ದಾರೆ.