ನವದೆಹಲಿ: ಭಾರತೀಯರಿಗೆ ಚಿನ್ನದ ಮೇಲಿರುವ ವ್ಯಾಮೋಹ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬಂತೆ ಕಳೆದ ಮೇನಲ್ಲಿ ಬಂಗಾರದ ಆಮದು ಬರೋಬ್ಬರಿ 677% ಹೆಚ್ಚಳವಾಗಿದೆ.
ಮೇ ತಿಂಗಳೊಂದರಲ್ಲಿಯೇ ಭಾರತ 101 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷ ಮೇನಲ್ಲಿ 13 ಟನ್ ಚಿನ್ನ ಆಮದು ಮಾಡಿಕೊಂಡಿತ್ತು.
ಮೇನಲ್ಲಿ ಭಾರತ ಆಮದು ಮಾಡಿರುವ ಬಂಗಾರದ ಮೌಲ್ಯ 43,725 ಕೋಟಿ ರೂ. ಅಕ್ಷಯ ತೃತೀಯದ ಸಂದರ್ಭದಲ್ಲಿ ದರ ಇಳಿಕೆಯಾಗಿದ್ದರಿಂದ ಗ್ರಾಹಕರು ಜ್ಯುವೆಲ್ಲರಿ ಮಳಿಗೆಗೆ ಧಾವಿಸಿ ಬಂಗಾರ ಖರೀದಿಸಿದ್ದರು. ಅಕ್ಷಯ ತೃತೀಯದ ವಾರವಿಡೀ ಬಂಗಾರದ ಖರೀದಿ ಭರಾಟೆ ನಡೆದಿತ್ತು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಮೇನಲ್ಲಿ ಚಿನ್ನದ ದರ 10 ಗ್ರಾಮ್‌ಗೆ 49,572 ರೂ.ಗೆ ಇಳಿಮುಖವಾಗಿತ್ತು. ಕಳೆದ 3 ತಿಂಗಳಿನಲ್ಲಿಯೇ ಇದು ಕಡಿಮೆ ದರವಾಗಿತ್ತು. ಮದುವೆ ಸೀಸನ್ ಆಗಿದ್ದರಿಂದಲೂ ಖರೀದಿ ಜೋಶ್ ಇತ್ತು. ಕಳೆದ ವರ್ಷ ಕೋವಿಡ್ ನಿರ್ಬಂಧ ಇದ್ದುದರಿಂದ ಮದುವೆಗಳೂ ಮುಂದೂಡಿಕೆಯಾಗಿತ್ತು. ಜುಲೈನಲ್ಲಿ 60 ಟನ್ನಿಗೆ ಆಮದು ಇಳಿಕೆಯಾಗುವ ಸಾಧ್ಯತೆ ಇದೆ.
ವಿತ್ತೀಯ ಕೊರತೆ ಹೆಚ್ಚಳ
ಚಿನ್ನ ಮತ್ತು ಕಚ್ಚಾ ತೈಲದ ಭಾರಿ ಆಮದಿನ ಪರಿಣಾಮ ಕಳೆದ ಮೇನಲ್ಲಿ ವ್ಯಾಪಾರ ಕೊರತೆ 1.79 ಲಕ್ಷ ಕೋಟಿ ರೂ.ಗೆ ಏರಿತ್ತು. ಮೇನಲ್ಲಿ ಭಾರತ 1.39 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿತ್ತು. ಭಾರತ 85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕಳೆದ ಕೆಲ ತಿಂಗಳಿನಿಂದ ಕಚ್ಚಾ ತೈಲ ದರ ಬ್ಯಾರೆಲ್‌ಗೆ 120 ಡಾಲರ್‌ಗೆ ಜಿಗಿದಿದೆ.