Site icon Vistara News

Palm oil : ಭಾರತದ ಪಾಮ್‌ ಆಯಿಲ್‌ ಆಮದು ಮಾರ್ಚ್‌ನಲ್ಲಿ 28% ಏರಿಕೆ, ಕಾರಣವೇನು?

palm oil

ನವ ದೆಹಲಿ: ಭಾರತದ ತಾಳೆ ಎಣ್ಣೆ (Palm oil) ಆಮದು ಕಳೆದ ಮಾರ್ಚ್‌ನಲ್ಲಿ 28% ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಎಂಟು ತಿಂಗಳಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದ ತಾಳೆ ಎಣ್ಣೆ ಆಮದು ದಿಢೀರ್‌ ಹೆಚ್ಚಳವಾಗಿದೆ. ತೈಲ ರಫ್ತುದಾರರು ಡಿಸ್ಕೌಂಟ್‌ ದರದಲ್ಲಿ ನೀಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ.

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿರುವ ದೇಶವಾಗಿದೆ. ಮಲೇಷ್ಯಾಕ್ಕೆ ತನ್ನಲ್ಲಿರುವ ತಾಳೆ ಎಣ್ಣೆ ದಾಸ್ತಾನನ್ನು ವಿಲೇವಾರಿ ಮಾಡಬೇಕಾದ ಅಗತ್ಯ ಇದೆ. ಹೀಗಾಗಿ ಡಿಸ್ಕೌಂಟ್‌ ದರದಲ್ಲಿ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಪಾಮ್‌ ಆಯಿಲ್‌ ದರವನ್ನು ನಿಯಂತ್ರಿಸಲೂ ಇದು ಸಹಕಾರಿಯಾಗಿದೆ. ಭಾರತ ಕಳೆದ ಮಾರ್ಚ್‌ನಲ್ಲಿ 750,000 ಟನ್‌ ಪಾಮ್‌ ಆಯಿಲ್‌ ಅನ್ನು ಆಮದು ಮಾಡಿತ್ತು.

ಹೀಗಿದ್ದರೂ ಸೋಯಾ ಎಣ್ಣೆ ಆಮದು ಮಾರ್ಚ್‌ನಲ್ಲಿ 27% ಇಳಿದಿತ್ತು. ಏಪ್ರಿಲ್-ಮೇನಲ್ಲಿ ಪಾಮ್‌ ಆಯಿಲ್‌ ಆಮದು ಇಳಿಕೆಯಾಗುವ ಸಾಧ್ಯತೆ ಇದೆ. ಭಾರತವು ಇಂಡೊನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್‌ನಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

ಸರಕು ರಫ್ತು ಹೆಚ್ಚಳ:

ಭಾರತದ ಸರಕುಗಳ ರಫ್ತು 2022-23ರಲ್ಲಿ ದಾಖಲೆಯ 447 ಶತಕೋಟಿ ಡಾಲರ್‌ಗೆ (36 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಅಂತಿಮ ಅಂಕಿ ಅಂಶಗಳು ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದೆ (Goods exports growth) ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ತಿಳಿಸಿದ್ದಾರೆ. ಸೇವೆಗಳ ರಫ್ತು 2022-23ರಲ್ಲಿ 320 ಶತಕೋಟಿ ಡಾಲರ್‌ (26 ಲಕ್ಷ ಕೋಟಿ ರೂ.) ದಾಟುವ ಸಾಧ್ಯತೆ ಇದೆ. ಸಚಿವಾಲಯ ಈಗ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ.

ಕಳೆದ 2021-22ಕ್ಕೆ ಹೋಲಿಸಿದರೆ ಸರಕುಗಳ ರಫ್ತು 6% ಹೆಚ್ಚಳವಾಗುವ ನಿರೀಕ್ಷೆ ಇದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ವಸ್ತುಗಳ ಸಾಮಾಗ್ರಿಗಳ ದರ ಹೆಚ್ಚಳ, ಗೋಧಿ ಮತ್ತಿತರ ವಸ್ತಿಗಳ ರಫ್ತಿಗೆ ನಿರ್ಬಂಧ, ರಷ್ಯಾ-ಉಕ್ರೇನ್‌ ಸಂಘರ್ಷದ ಸವಾಲುಗಳ ಹೊರತಾಗಿಯೂ ರಫ್ತು ವೃದ್ಧಿಸಿದೆ ಎಂದು ಅವರು ತಿಳಿಸಿದರು.

ಅಂತಿಮವಾಗಿ ಸರಕು ಮತ್ತು ಸೇವೆಗಳ ರಫ್ತು ಮೌಲ್ಯ 765 ಶತಕೋಟಿ ಡಾಲರ್‌ (62 ಲಕ್ಷ ಕೋಟಿ ರೂ.) ದಾಟುವ ನಿರೀಕ್ಷೆ ಇದೆ ಎಂದು ಸಚಿವ ಪಿಯೂಷ್‌ ಗೋಯೆಲ್‌ ತಿಳಿಸಿದರು. ಭಾರತವು ಎಂಜಿನಿಯರಿಂಗ್‌, ಪೆಟ್ರೋಲಿಯಂ ಉತ್ಪನ್ನಗಳು, ಜ್ಯುವೆಲ್ಲರಿ, ಕೃಷಿ ಉತ್ಪನ್ನಗಳು, ರಾಸಾಯನಿಕ ಉತ್ಪನ್ನಗಳ ರಫ್ತು ಏರಿಕೆಯಾಗಿದೆ.

Exit mobile version