ನವ ದೆಹಲಿ: ಇಂಡೊನೇಷ್ಯಾ ಇತ್ತೀಚೆಗೆ ತನ್ನ ರಫ್ತು ನಿಷೇಧವನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ 2 ಲಕ್ಷ ಟನ್ ತಾಳೆ ಎಣ್ಣೆ ಶೀಘ್ರದಲ್ಲೇ ಭಾರತಕ್ಕೆ ತಲುಪಲಿದೆ. ಇದರಿಂದ ಮುಂಬರುವ ವಾರಗಳಲ್ಲಿ ಅಡುಗೆ ಎಣ್ಣೆಯ ದರಗಳು ಇಳಿಯಲಿವೆ.
ಮಾತ್ರವಲ್ಲದೆ ತಾಳೆ ಎಣ್ಣೆಯ ದರಗಳು ಇಳಿಕೆಯಾಗುವುದರಿಂದ ಸೋಪು, ಶ್ಯಾಂಪೂ, ಬಿಸ್ಕತ್ ಮತ್ತು ಚಾಕೊಲೇಟ್‌ಗಳ ಕಚ್ಚಾ ಸಾಮಾಗ್ರಿಗಳ ದರದಲ್ಲೂ ಕಡಿತವಾಗಲಿದೆ. ಇವುಗಳ ತಯಾರಿಕೆಯಲ್ಲಿ ತಾಳೆ ಎಣ್ಣೆಯನ್ನು ಬಳಸುತ್ತಿರುವುದು ಇದಕ್ಕೆ ಕಾರಣ. ಇಂಡೊನೇಷ್ಯಾ ಕಳೆದ ಏಪ್ರಿಲ್ 28ರಂದು ತಾಳೆ ಎಣ್ಣೆ ರಫ್ತಿಗೆ ನಿಷೇಧ ಹೇರಿತ್ತು. ಬಳಿಕ ಮೇ 23 ರಂದು ತೆರವುಗೊಳಿಸಿತ್ತು. ಭಾರತ ಈಗ 1.3 ಕೋಟಿ ಟನ್ ಖಾದ್ಯ ತೈಲವನ್ನು ಆಮದು ಮಾಡುತ್ತಿದೆ. ಅದರಲ್ಲಿ 80 ಲಕ್ಷ ಟನ್ ತಾಳೆ ಎಣ್ಣೆಯೇ ಆಗಿದೆ. ಶೇ.45ರಷ್ಟು ತಾಳೆ ಎಣ್ಣೆ ಇಂಡೊನೇಷ್ಯಾದಿಂದಲೇ ಬರುತ್ತಿದೆ.
“ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ವಾರಗಳಲ್ಲಿ ಖಾದ್ಯ ತೈಲಗಳ ದರ ಇಳಿಕೆಯಾಗಿವೆ. ಆದರೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಅದು ಗ್ರಾಹಕರಿಗೆ ವರ್ಗಾವಣೆಯಾಗಿರಲಿಲ್ಲ. ಹೀಗಿದ್ದರೂ, ರಷ್ಯಾ ಮತ್ತು ಅರ್ಜೆಂಟೀನಾದಿಂದ ಸೂರ್ಯಕಾಂತಿ ಎಣ್ಣೆ ರಫ್ತಾಗುತ್ತಿಎ. ಆದ್ದರಿಂದ ಗೃಹ ವಲಯದ ಬೇಡಿಕೆಯನ್ನು ಪೂರೈಸಲಾಗುತ್ತಿದೆʼʼ ಎಂದು ಜೆಮಿನಿ ಈಡೆಬಲ್ಸ್ ಆಂಡ್ ಫ್ಯಾಟ್ಸ್ ಕಂಪನಿಯ ಎಂಡಿ ಪ್ರದೀಪ್ ಚೌಧುರಿ ತಿಳಿಸಿದ್ದಾರೆ.
ಇದೀಗ ಇಂಡೊನೇಷ್ಯಾದಿಂದ ತಾಳೆ ಎಣ್ಣೆ ಲಭಿಸುತ್ತಿರುವುದರಿಂದ ಅಡುಗೆ ಎಣ್ಣೆಯ ದರಗಳು ಇಳಿದರೆ ಸರಕಾರಕ್ಕೆ ಮತ್ತು ಬಳಕೆದಾರರಿಗೆ ಸ್ವಲ್ಪ ನಿರಾಳವಾಗಲಿದೆ.
ಇದನ್ನೂ ಓದಿ:GOOD NEWS: ಖಾದ್ಯ ತೈಲ ದರ ಶೀಘ್ರ ಇಳಿಕೆ, ಇಂಡೊನೇಷ್ಯಾದಿಂದ ರಫ್ತು ನಿಷೇಧ ವಾಪಸ್