ಹೊಸದಿಲ್ಲಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದು ಸಿಹಿ ಸುದ್ದಿ. ಶೀಘ್ರದಲ್ಲಿಯೇ ತಾಳೆ ಎಣ್ಣೆ ಸೇರಿದಂತೆ ಖಾದ್ಯ ತೈಲ ದರಗಳು ಇಳಿಕೆಯಾಗಲಿವೆ.
ಇಂಡೊನೇಷ್ಯಾ ತಾಳೆ ಎಣ್ಣೆ (ಪಾಮ್ ಆಯಿಲ್) ಮೇಲಿನ ರಫ್ತು ನಿಷೇಧವನ್ನು ಮೇ 23ರಿಂದ ತೆರವುಗೊಳಿಸಲಿದೆ. ಇಂಡೊನೇಷ್ಯಾದಲ್ಲಿ ಖಾದ್ಯ ತೈಲ ಸರಬರಾಜು ಸುಧಾರಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ರಫ್ತು ನಿಷೇಧವನ್ನು ಸೋಮವಾರದಿಂದ ರದ್ದುಪಡಿಸಿದೆ.
ಇಂಡೊನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಈ ವಿಷಯ ತಿಳಿಸಿದ್ದಾರೆ. ಇಂಡೊನೇಷ್ಯಾದಲ್ಲಿ ತಾಳೆ ಎಣ್ಣೆ ಉತ್ಪಾದನೆ ಬೃಹತ್ ಉದ್ದಿಮೆಯಾಗಿದ್ದು, 1.7 ಲಕ್ಷ ಕಾರ್ಮಿಕರು ಅಲ್ಲಿ ದುಡಿಯುತ್ತಿದ್ದಾರೆ. ಅವರ ಹಿತಾಸಕ್ತಿಯಿಂದಲೂ ಸರಕಾರ ರಫ್ತು ನಿಷೇಧವನ್ನು ಹಿಂತೆಗೆದುಕೊಂಡಿದೆ. ಇಂಡೊನೇಷ್ಯಾದಲ್ಲಿ ತಾಳೆ ಎಣ್ಣೆ ರಫ್ತು ನಿಷೇಧ ತೆರವುಗೊಳಿಸಲು ಅಲ್ಲಿನ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ನಿಷೇಧದಿಂದ ಭಾರತದಲ್ಲೂ ಖಾದ್ಯ ತೈಲ ದರ ಹೆಚ್ಚಳವಾಗಿತ್ತು. ಇದೀಗ ನಿಷೇಧ ತೆರವಾಗುತ್ತಿರುವುದರಿಂದ ಮಾರುಕಟ್ಟೆಗೆ ಪೂರೈಕೆ ಹೆಚ್ಚಲಿದ್ದು, ದರ ಇಳಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.