Site icon Vistara News

Interest rate : ಜನವರಿಯಲ್ಲಿ ಹಣದುಬ್ಬರ ಹೆಚ್ಚಳ ಎಫೆಕ್ಟ್‌, ಏಪ್ರಿಲ್‌ನಲ್ಲಿ ಆರ್‌ಬಿಐನಿಂದ ಮತ್ತೆ 0.25% ಬಡ್ಡಿ ದರ ಏರಿಕೆ ಸಂಭವ

rbi

ನವ ದೆಹಲಿ: ಕಳೆದ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಮೂರು ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಆರ್‌ಬಿಐ, ಮುಂಬರುವ ಏಪ್ರಿಲ್‌ನಲ್ಲಿ ರೆಪೊ ದರದಲ್ಲಿ ಮತ್ತೆ 0.25% ಹೆಚ್ಚಳ ಮಾಡುವ ನಿರೀಕ್ಷೆ ಇದೆ. (Interest rate) ಆರ್‌ಬಿಐ ಪ್ರಕಾರ ಹಣದುಬ್ಬರ ಗರಿಷ್ಠ 6% ಇರಬಹುದು. ಅದನ್ನು ಮೀರಿದರೆ ರೆಪೊ ದರ ಏರಿಕೆ ಮೂಲಕ ನಿಯಂತ್ರಿಸಲು ಮುಂದಾಗಬಹುದು. ಜನವರಿಯಲ್ಲಿ ರಿಟೇಲ್‌ ಹಣದುಬ್ಬರ 6.52%ಕ್ಕೆ ವೃದ್ಧಿಸಿತ್ತು.

ಆರ್‌ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಏಪ್ರಿಲ್‌ನಲ್ಲಿ ನಡೆಯಲಿದೆ. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಆರ್‌ಬಿಐನ ಸಹಿಷ್ಣುತೆಯ ಮಟ್ಟವನ್ನು ಮೀರಿರುವುದರಿಂದ ರೆಪೊ ದರ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಕಳೆದ 2022ರಲ್ಲಿ ನವೆಂಬರ್‌ ಮತ್ತು ಡಿಸೆಂಬರ್‌ ಹೊರತುಪಡಿಸಿ ಉಳಿದೆಲ್ಲ ಅವಧಿಯುದ್ದಕ್ಕೂ ಚಿಲ್ಲರೆ ಹಣದುಬ್ಬರ 6% ಮೇಲಿತ್ತು. 2022ರ ಅಕ್ಟೋಬರ್‌ನಲ್ಲಿ 6.77% ಹಣದುಬ್ಬರ ದಾಖಲಾಗಿತ್ತು.

ನವೆಂಬರ್-ಡಿಸೆಂಬರ್‌ನಲ್ಲಿ ಇಳಿಮುಖವಾಗಿದ್ದ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಮತ್ತೆ ಏರಿಕೆಯಾಗಿ ಶಾಕ್‌ ಕೊಟ್ಟಿತ್ತು. ಆಹಾರ ಧಾನ್ಯಗಳ ಬೆಲೆ ಹೆಚ್ಚಳ ಪ್ರತಿಕೂಲ ಪ್ರಭಾವ ಬೀರಿದೆ. ಹೀಗಾಗಿ ಏಪ್ರಿಲ್‌ನಲ್ಲಿ ಆರ್‌ಬಿಐ ತನ್ನ ರೆಪೊ ದರವನ್ನು ಈಗಿನ 6.50%ರಿಂದ 6.75%ಕ್ಕೆ ಏರಿಸುವ ಸಾಧ್ಯತೆ ಇದೆ. ರೆಪೊ ದರ ಏರಿಕೆಯಾದರೆ ಸಾಲಗಳ ಬಡ್ಡಿ ದರ ಹೆಚ್ಚಳವಾಗಲಿದೆ. ಠೇವಣಿ ದರ ಕೂಡ ವೃದ್ಧಿಸಬಹುದು.

Exit mobile version