ಇಸ್ಲಮಾಬಾದ್: ವಿಶ್ವದ ಐದನೇ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿರುವ ಪಾಕಿಸ್ತಾನದಲ್ಲಿ ಹಣದುಬ್ಬರ ದಾಖಲೆಯ 47%ಕ್ಕೆ ಏರಿಕೆಯಾಗಿದೆ. ಪ್ರತಿ ಕೆ.ಜಿ ಈರುಳ್ಳಿಯ ದರ 225 ರೂ.ಗೆ ಏರಿಕೆಯಾಗಿದೆ. ಖೈಬರ್ ಪಂಕ್ತೂನ್‌ಖ್ವಾ ಪ್ರಾಂತ್ಯದಲ್ಲಿ ಗೋಧಿ ಚೀಲಗಳನ್ನು ವಿತರಿಸುವಾಗ ಕಾಲ್ತುಳಿತಕ್ಕೆ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ. ನೂಕು ನುಗ್ಗಲಿಗೆ ಅಕ್ಕಿ ಗಿರಣಿಯ ಕಂಪೌಂಡ್ ಕುಸಿದಿದೆ. ದಕ್ಷಿಣ ಪಂಜಾಬ್‌ನಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಐವರು ಮಹಿಳೆಯರಿಗೆ ಗಾಯವಾಗಿದೆ. ಜನತೆಗೆ ಉಚಿತವಾಗಿ ಗೋಧಿ ಚೀಲಗಳನ್ನು ವಿತರಿಸುವ ಸಂದರ್ಭ ಕಾಲ್ತುಳಿತ ಸಂಭವಿಸಿದೆ. ಕಳೆದ ಜನವರಿಯಲ್ಲೂ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದ,.
ಪಾಕಿಸ್ತಾನ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಮಾರ್ಚ್ 22ಕ್ಕೆ ಅಂತ್ಯವಾದ ವಾರದಲ್ಲಿ ಹಣದುಬ್ಬರ 47%ಕ್ಕೆ ಏರಿಕೆಯಾಗಿದೆ. ಈರುಳ್ಳಿ ದರದಲ್ಲಿ 228%, ಗೋಧಿ ಹಿಟ್ಟಿನ ದರದಲ್ಲಿ 120% ಏರಿಕೆಯಾಗಿದೆ. ಅಡುಗೆ ಅನಿಲ ದರದದಲ್ಲಿ 108%, ಚಹಾ ದರದಲ್ಲಿ 94% ಹೆಚ್ಚಳವಾಗಿದೆ. ಡೀಸೆಲ್ ದರದಲ್ಲಿ 102%, ಬಾಳೆ ಹಣ್ಣಿನ ದರದಲ್ಲಿ 89%, ಪೆಟ್ರೋಲ್ ದರದಲ್ಲಿ 81% ಏರಿಕೆಯಾಗಿದೆ.
ಐಎಂಎಫ್‌ನಿಂದ ಮತ್ತೆ ಷರತ್ತು:
ಪಾಕಿಸ್ತಾನವು ಹೊಸ ಸಾಲ ಪಡೆಯಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (International Monetary Fund) ಜತೆಗೆ ಮಾತುಕತೆಗೆ ಯತ್ನಿಸುತ್ತಿದೆ. ಆದರೆ ಐಎಂಎಫ್ ಇದಕ್ಕಾಗಿ ಹೊಸ ಷರತ್ತು ಇಟ್ಟಿದೆ. ಐಎಂಎಫ್‌ನಿಂದ 1.1 ಶತಕೋಟಿ ಡಾಲರ್ ( 9,020 ಕೋಟಿ ರೂ.) ಸಾಲದ ಹಣ ಬಿಡುಗಡೆಗೆ ಪಾಕಿಸ್ತಾನ ಹರ ಸಾಹಸಪಡುತ್ತಿದೆ. ಐಎಂಎಫ್‌ನ ಒತ್ತಾಯಕ್ಕೆ ಮಣಿದು ಪೆಟ್ರೋಲ್-ಡೀಸೆಲ್, ಅನಿಲ ದರಗಳನ್ನು ಪಾಕ್ ಸರ್ಕಾರ ಏರಿಸಿದೆ. 2019ರಲ್ಲಿ ಐಎಂಎಫ್ ಸುಮಾರು 6.5 ಶತಕೋಟಿ ಡಾಲರ್ (ಅಂದಾಜು 53,300 ಕೋಟಿ ರೂ.) ಸಾಲ ಕೊಡುವುದಾಗಿ ಒಪ್ಪಂದ ಮಾಡಿತ್ತು. ಆದರೆ ಐಎಂಎಫ್ ಇದುವರೆಗೆ ಕೊಟ್ಟಿಲ್ಲ. ಬದಲಿಗೆ ಒಂದಾದ ಮೇಲೊಂದರಂತೆ ಷರತ್ತುಗಳನ್ನು ಹಾಕುತ್ತಿದೆ. ಇನ್ನು ಕೇವಲ 4 ವಾರಗಳ ಆಮದಿಗೆ ಸಾಕಾಗುವಷ್ಟು ಹಣವನ್ನು ಪಾಕ್ ಈಗ ಹೊಂದಿದೆ.
ಮತ್ತೊಂದು ಮಿಲಿಟರಿ ದಂಗೆ?
ಒಂದು ಕಡೆ ಪಾಕಿಸ್ತಾನದ ಅಧಿಕಾರಿಗಳು ಐಎಂಎಫ್ ನಿಯೋಗದ ಜತೆಗೆ ಸಾಲಕ್ಕೆ ಮಾತುಕತೆ ನಡೆಸುತಿದ್ದರೆ, ಮತ್ತೊಂದು ಕಡೆ ಪಾಕ್ ಸೇನಾಪಡೆಯ ಟಾಪ್ ಕಮಾಂಡರ್‌ಗಳು ಸಭೆ ಕರೆದಿದ್ದಾರೆ. ಪಾಕಿಸ್ತಾನದಲ್ಲಿ ಮತ್ತೊಂದು ಮಿಲಿಟರಿ ದಂಗೆ ಸಂಭವಿಸಲಿದೆಯೇ ಎಂಬ ಊಹಾಪೋಹ ಸೃಷ್ಟಿಯಾಗಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರು ಮತ್ತು ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಮಿಲಿಟರಿ ಮಧ್ಯಪ್ರವೇಶಿಸಲಿದೆಯೇ ಎಂಬ ಸಂದೇಹ ಉಂಟಾಗಿದೆ. ಕಳೆದ 75 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಮಿಲಿಟರಿ ಪಡೆ ಮೂರು ಸಲ ಅಧಿಕಾರವನ್ನು ವಹಿಸಿಕೊಂಡಿದೆ. ದೇಶವನ್ನು 4 ದಶಕಗಳ ಕಾಲ ನೇರವಾಗಿ ಆಳಿದೆ. ಪಾಕಿಸ್ತಾನದ ವಿದೇಶಿ ಮೂಲದ ಸಾಲ ಜಿಡಿಪಿಯ 95.39%ಕ್ಕೆ ಏರಿಕೆಯಾಗಿದೆ. 130 ಶತಕೋಟಿ ಡಾಲರ್‌ಗೆ (11.39 ಲಕ್ಷ ಕೋಟಿ ರೂ.) ವೃದ್ಧಿಸಿದೆ.
ಮಿಲಿಟರಿ ವೆಚ್ಚ ಕಡಿತಕ್ಕೆ ಐಎಂಎಫ್ ಒತ್ತಾಯ:
ಹೊಸ ಸಾಲ ಬೇಕಿದ್ದರೆ ಮಿಲಿಟರಿ ವೆಚ್ಚದಲ್ಲಿ ಗಣನೀಯ ಕಡಿತ ಮಾಡಬೇಕು ಎಂದು ಐಎಂಎಫ್, ಪಾಕಿಸ್ತಾನವನ್ನು ಒತ್ತಾಯಿಸುತ್ತಿದೆ. ಇತ್ತೀಚೆಗೆ ವಾರ್ಷಿಕ ಮಿಲಿಟರಿ ಪರೇಡ್ ಅನ್ನೂ ರದ್ದುಪಡಿಸಲಾಗಿತ್ತು. ಸರ್ಕಾರ ಮತ್ತು ಪಾಕ್ ಸೇನಾ ಪಡೆ ನಡುವೆ ಸಂಘರ್ಷ ಏರ್ಪಡುವ ಸಾದ್ಯತೆ ಇದೆ ಎಂದು ವರದಿಯಾಗಿದೆ.