ನವ ದೆಹಲಿ: ಭಾರತದ ಚಿಲ್ಲರೆ ಹಣದುಬ್ಬರ (Inflation) ಕಳೆದ ಜುಲೈನಲ್ಲಿ ೬.೭೧%ಕ್ಕೆ ಇಳಿಕೆಯಾಗಿದೆ. ಕಳೆದ ಮಾರ್ಚ್‌ನಿಂದ ಇದು ಕೆಳಮಟ್ಟವಾಗಿದೆ. ಹೀಗಿದ್ದರೂ, ಆರ್‌ಬಿಐನ ಸುರಕ್ಷತಾ ಮಟ್ಟವನ್ನು ಮೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೭.೦೧%ರ ಹಣದುಬ್ಬರ ಇತ್ತು. ಖಾದ್ಯ ತೈಲ ದರದಲ್ಲಿ ೦.೪%ರಿಂದ ೬.೪% ತನಕ ದರ ಇಳಿಕೆಯಾಗಿದೆ. ಸರಕುಗಳ ದರದಲ್ಲೂ ಇಳಿಕೆ ಕಂಡುಬಂದಿದೆ. ಒಟ್ಟಾರೆಯಾಗಿ ಆಹಾರ ಹಣದುಬ್ಬರ ಜುಲೈನಲ್ಲಿ ೬.೭೫%ಕ್ಕೆ ತಗ್ಗಿದೆ. ಜೂನ್‌ನಲ್ಲಿ ಇದು ೭.೭೫% ಇತ್ತು.
ಈ ವರ್ಷ ಚಿಲ್ಲರೆ ಹಣದುಬ್ಬರ
ಜನವರಿ | 6.01% |
ಫೆಬ್ರವರಿ | 6.95% |
ಮಾರ್ಚ್ | 6.95% |
ಏಪ್ರಿಲ್ | 7.79% |
ಮೇ | 7.97% |
ಜೂನ್ | 7.01% |
ಜುಲೈ | 6.71% |
ರಫ್ತು ೨.೧೪% ಏರಿಕೆ, ವ್ಯಾಪಾರ ಕೊರತೆ ೩ ಪಟ್ಟು ಹೆಚ್ಚಳ:
ಜುಲೈನಲ್ಲಿ ಭಾರತದ ರಫ್ತು ೨.೧೪% ಹೆಚ್ಚಳವಾಗಿದ್ದು, ೩೬.೨೭ ಶತಕೋಟಿ ಡಾಲರ್‌ಗೆ (೨.೮೬ ಲಕ್ಷ ಕೋಟಿ ರೂ.) ವೃದ್ಧಿಸಿದೆ. ಆದರೆ ವ್ಯಾಪಾರ ಕೊರತೆ ಮೂರು ಪಟ್ಟು ಹೆಚ್ಚಳವಾಗಿದ್ದು, ೩೦ ಶತಕೋಟಿ ಡಾಲರ್‌ಗೆ (೨.೩೪ ಲಕ್ಷ ಕೋಟಿ ರೂ.) ವೃದ್ಧಿಸಿದೆ. ೨೦೨೧ರ ಜುಲೈನಲ್ಲಿ ವ್ಯಾಪಾರ ಕೊರತೆ ೧೦.೬೩ ಶತಕೋಟಿ ಡಾಲರ್‌ನಷ್ಟಿತ್ತು. ದೇಶದ ಆಮದು ೪೩% ಹೆಚ್ಚಳವಾಗಿದ್ದು, ೬೬.೨೭ ಶತಕೋಟಿ ಡಾಲರ್‌ಗೆ (೫.೧೬ ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ರಫ್ತಿಗಿಂತ ಆಮದು ಹೆಚ್ಚಳವಾದಾಗ ವ್ಯಾಪಾರ ಕೊರತೆ ಉಂಟಾಗುತ್ತದೆ.
ಉದ್ಯಮ ವಲಯದ ಉತ್ಪಾದನೆ ಇಳಿಕೆ: ಭಾರತದ ಕೈಗಾರಿಕಾ ವಲಯದ ಉತ್ಪಾದನೆ ಕಳೆದ ಜೂನ್‌ನಲ್ಲಿ ೧೨.೩%ಕ್ಕೆ ಇಳಿಕೆಯಾಗಿದೆ. ಜೂನ್‌ನ್ಲಲಿ ೧೯.೬% ಇತ್ತು.
ವಿದೇಶಿ ವಿನಿಮಯ ಸಂಗ್ರಹ ಇಳಿಕೆ: ಭಾರತದ ವಿದೇಶಿ ವಿನಿಮಯ ಸಂಗ್ರಹ, ಆಗಸ್ಟ್ ೫ಕ್ಕೆ ಮುಕ್ತಾಯವಾದ ವಾರದಲ್ಲಿ ೮೯೭ ದಶಲಕ್ಷ ಡಾಲರ್ (೮೯.೭ ಕೋಟಿ ರೂ.) ಇಳಿದಿದ್ದು, ೫೭೨ ಶತಕೋಟಿ ಡಾಲರ್‌ನಷ್ಟಿತ್ತು (೪೪ ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹ ಇಳಿಕೆಯಾಗುತ್ತಿರುವುದು ಇದಕ್ಕೆ ಕಾರಣ.