ಬೆಂಜಮಿನ್ ಫ್ರಾಂಕ್ಲಿನ್ ಅವರು ಹೀಗೆನ್ನುತ್ತಾರೆ- ಸಣ್ಣ ಪುಟ್ಟ ಖರ್ಚು ವೆಚ್ಚಗಳ ಬಗ್ಗೆಯೂ ಎಚ್ಚರದಿಂದಿರಿ. ಒಂದು ಸಣ್ಣ ಸೋರಿಕೆಯೂ ಹಡಗನ್ನು ಮುಳುಗಿಸಬಲ್ಲುದು. ( Inflation ) ಹಣಕಾಸು ವಿಚಾರಗಳ ಬಗ್ಗೆ ಮಾತನಾಡುವವರು ಈ ನುಡಿಯನ್ನು ಪ್ರಸ್ತಾಪಿಸುತ್ತಾರೆ. ನೀವು ಉದ್ಯೋಗಿಯಾಗಿರಬಹುದು (money guide) ಅಥವಾ ದೊಡ್ಡ ಬಿಸಿನೆಸ್ ನಡೆಸುತ್ತಿರಬಹುದು. ಸಣ್ಣ ಪುಟ್ಟ ಖರ್ಚುಗಳ ಬಗ್ಗೆಯೂ ಒಂದು ಕಣ್ಣಿಡಲೇಬೇಕಾಗುತ್ತದೆ. ಕೆಲವರು ಜನ ಮತ್ತು ಸಮಾಜ ಏನೆನ್ನುತ್ತದೋ ಎಂಬ ಕಾರಣಕ್ಕಾಗಿ ಅನಗತ್ಯವಾಗಿ ನೀರಿನಂತೆ ಹಣವನ್ನು ಪೋಲು ಮಾಡುತ್ತಾರೆ. ಮದುವೆಗಾಗಿ ಹೊಲ ಮಾರಿ, ಸಾಲ ಸೋಲ ಮಾಡಿ ಲಕ್ಷಾಂತರ ರೂ. ಖರ್ಚು ಮಾಡುವರು ಇದ್ದಾರೆ. ಆದರೆ ಇದು ಸರಿಯಾದ ಹಣಕಾಸು ನಿರ್ವಹಣೆಯಂತೂ ನಿಸ್ಸಂದೇಹವಾಗಿ ಅಲ್ಲ.
ಒಂದು ವೇಳೆ ನೀವು ಆಗಿಂದಾಗ್ಗೆ ಹೋಟೆಲ್, ರೆಸ್ಟೊರೆಂಟ್‌ಗೆ ತೆರಳಿ ಊಟೋಪಚಾರಗಳನ್ನು ಎಂಜಾಯ್ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಪ್ರತಿ ಸಲದ ಬಿಲ್ ಅನ್ನು ಪ್ರತ್ಯೇಕವಾಗಿ ನೋಡಿದರೆ, ಸಣ್ಣ ಮೊತ್ತ ಎನ್ನಿಸಬಹುದು. ಆದರೆ ಪ್ರತಿ ಸಲ ಹೋಗಿ ಮಾಡಿದ ಎಲ್ಲ ಬಿಲ್‌ಗಳನ್ನು ಒಮ್ಮೆ ಜೋಡಿಸಿಟ್ಟು ಲೆಕ್ಕ ಹಾಕಿ. ಎಷ್ಟು ದೊಡ್ಡ ಮೊತ್ತದ ಬಿಲ್ ಆಗಿರುತ್ತದೆ ಎಂಬುದು ನಿಮಗೇ ಗೊತ್ತಾಗುತ್ತದೆ. ಇಂಥ ಖರ್ಚು ವೆಚ್ಚಗಳನ್ನು ಮತ್ತಷ್ಟು ಹೆಚ್ಚಿಸುವ ಮತ್ತೊಂದು ಅಂಶವೇ ಹಣದುಬ್ಬರ. ಇದು ನಿಮ್ಮ ಉಳಿತಾಯವನ್ನು ನುಂಗಿ ಹಾಕಿ ಬಿಡುತ್ತದೆ.
ಏನಿದು ಹಣದುಬ್ಬರ? ಬೆಲೆ ಏರಿಕೆಯನ್ನು ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಹಣದುಬ್ಬರ ಎನ್ನುತ್ತಾರೆ. ಇದರ ಪರಿಣಾಮ ಜನರಿಗೆ ಸರಕುಗಳು ಮತ್ತು ಸೇವೆಗಳನ್ನು ಖರೀದಿಸುವ ಸಾಮರ್ಥ್ಯ ಕುಸಿಯುತ್ತದೆ. ದರಗಳು ಬೇಡಿಕೆ ಮತ್ತು ಪೂರೈಕೆಯನ್ನು ಆಧರಿಸಿ ಬದಲಾಗುತ್ತಿರುತ್ತವೆ.
ಇಲ್ಲೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಗ್ರೂಪ್ ಎ ಕಾರುಗಳನ್ನು ಉತ್ಪಾದಿಸುತ್ತದೆ. ಗ್ರೂಪ್ ಬಿಗೆ ಕಾರುಗಳ ಅಗತ್ಯವಿದೆ. ಗ್ರೂಪ್ ಎ 100 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 100 ಕಾರುಗಳಿಗೆ ಬೇಡಿಕೆ ಇದೆ. ಈ ಪರಿಸ್ಥಿತಿಯಲ್ಲಿ ಕಾರಿನ ಬೆಲೆ 5,00,000 ರೂ.ಗಳಿದ್ದರೆ, ಅದೇ ದರದಲ್ಲಿ ಮಾರಾಟವಾಗುತ್ತದೆ. ಈಗ ಗ್ರೂಪ್ ಬಿಗೆ ಮತ್ತೊಬ್ಬ ವ್ಯಕ್ತಿ ಸೇರ್ಪಡೆಯಾದರೆ ಏನಾಗುತ್ತದೆ. ಕಾರುಗಳ ಬೇಡಿಕೆ 101 ಕ್ಕೆ ಏರುತ್ತದೆ. ಆದರೆ ಒಟ್ಟು ಉತ್ಪಾದನೆಯಾಗುವ ಕಾರು 100 ಮಾತ್ರ. ಆಗ ಕಾರಿನ ದರ ಏನಾಗುತ್ತದೆ? ಏರುತ್ತದೆ.
ಹೀಗಾಗಿ ಉತ್ಪನ್ನ ಅಥವಾ ಸರಕಿಗೆ ಬೇಡಿಕೆ ಹೆಚ್ಚಿದಾಗ ದರ ಕೂಡ ಹೆಚ್ಚುತ್ತದೆ. ಆದರೆ ಪೂರೈಕೆ ಹೆಚ್ಚಳವಾದಾಗ ಬೇಡಿಕೆ ಕಡಿಮೆಯಾಗಿ ದರ ಕೂಡ ತಗ್ಗುತ್ತದೆ. ಹಾಗಾದರೆ ಪ್ರತಿ ಸಲ ಬೇಡಿಕೆ ಹೆಚ್ಚಿದಾಗ ದರ ಏರುತ್ತದೆಯೇ? ಪ್ರತಿ ಸಲ ಪೂರೈಕೆ ಕುಸಿದಾಗ ದರ ಕೂಡ ಇಳಿಯುತ್ತದೆಯೇ? ಹಾಗೇನೂ ಇಲ್ಲ.
ಮೇಲಿನ ಉದಾಹರಣೆಯಲ್ಲಿ ಗ್ರೂಪ್ ಬಿಯಿಂದ 101 ಕಾರುಗಳಿಗೆ ಬೇಡಿಕೆಯಾದಾಗ, ಗ್ರೂಪ್ ಎ 101 ಕಾರುಗಳನ್ನು ತಯಾರಿಸಿದರೆ ದರ ಏರಿಕೆಯಾಗದು. ಒಂದು ವಸ್ತು ಅಥವಾ ಸರಕಿನ ಬೇಡಿಕೆ ಏರಿದಾಗ, ಅದಕ್ಕೆ ತಕ್ಕಂತೆ ಪೂರೈಕೆ ಆಗದಿದ್ದಾಗ ಮಾತ್ರ ಬೆಲೆಗಳು ಏರಿಕೆಯಾಗುತ್ತದೆ. ಹೀಗಾಗಿ ಬೇಡಿಕೆ ಅಥವಾ ಪೂರೈಕೆಯಲ್ಲಿ ಏಕಪಕ್ಷೀಯವಾಗಿ ಏರಿಕೆಯಾದಾಗ ಮಾತ್ರ ದರಗಳು ಏರಿಕೆ ಅಥವಾ ಇಳಿಕೆಯಾಗುವುದನ್ನು ನಾವು ಕಾಣಬಹುದು.
ಇದನ್ನೂ ಓದಿ: Yuva Nidhi Scheme: ಡಿ. 26ರಿಂದ ಯುವನಿಧಿ ನೋಂದಣಿ ಶುರು; ಜ. 12ರಂದು ಖಾತೆಗೆ ಹಣ ಜಮೆ
ಹಣದುಬ್ಬರಕ್ಕೆ ಕಾರಣವೇನು? ರಾಷ್ಟ್ರಗಳ ಆಡಳಿತವನ್ನು ನೋಡಿಕೊಳ್ಳುವ ಸರ್ಕಾರಗಳು ಪ್ರತಿ ವರ್ಷ ತೆರಿಗೆ ಮತ್ತು ಸಾಲಗಳ ರೂಪದಲ್ಲಿ ಸಿಗುವ ಆದಾಯದ ಪ್ರಮಾಣ ಹಾಗೂ ಸಂಭವನೀಯ ಖರ್ಚು ವೆಚ್ಚಗಳನ್ನು ಪರಿಗಣಿಸುತ್ತವೆ. ಬಜೆಟ್‌ನಲ್ಲಿ ಈ ಕುರಿತ ಅಂಕಿ ಅಂಶಗಳು ಮಂಡನೆಯಾಗುತ್ತವೆ. ಖರ್ಚು ವೆಚ್ಚಗಳಲ್ಲಿ ಸರ್ಕಾರಿ ಇಲಾಖೆಗಳನ್ನು ನಡೆಸಲು, ಸಿಬ್ಬಂದಿಗಳ ವೇತನ, ಸಾಲಗಳಿಗೆ ನೀಡುವ ಬಡ್ಡಿ, ಅಭಿವೃದ್ಧಿ ಕಾರ್ಯಗಳಿಗೆ ತಗಲುವ ವೆಚ್ಚ ಇತ್ಯಾದಿಗಳು ಇರುತ್ತವೆ. ಆದರೆ ಇದಕ್ಕೆ ತಕ್ಕಂತೆ ಆದಾಯದ ಸಂಪನ್ಮೂಲಕ್ಕೆ ಕೊರತೆಯಾದಾಗ, ಹಣದುಬ್ಬರ ಉಂಟಾಗುತ್ತದೆ. ಖರ್ಚು ವೆಚ್ಚಗಳನ್ನು ಭರಿಸಲು ಆದಾಯ ಮತ್ತು ಸಾಲದ ಕೊರತೆ ಉಂಟಾದಾಗ ಸರ್ಕಾರಗಳು ನೋಟುಗಳನ್ನು ಮುದ್ರಿಸುತ್ತವೆ. ಅಥವಾ ಹಣವನ್ನು ಸೃಷ್ಟಿಸುತ್ತವೆ. ಇದಕ್ಕೆ ಡಿಫಿಸಿಟ್ ಫೈನಾನ್ಸಿಂಗ್ ಎನ್ನುತ್ತಾರೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ.
ಸರ್ಕಾರಗಳು ನೋಟುಗಳನ್ನು ಮುದ್ರಿಸಿದಾಗ ಹಣದ ಪೂರೈಕೆ ಮಾತ್ರ ಹೆಚ್ಚುತ್ತದೆ. ಅದೇ ರೀತಿ ಸರಕು ಮತ್ತು ಸೇವೆಗಳ ಪೂರೈಕೆ ಆಗದಿದ್ದರೆ ಬೆಲೆಗಳು ಏರುತ್ತವೆ. ಹಣದುಬ್ಬರ ಜಾಸ್ತಿಯಾದಾಗ ಪ್ರತಿಯೊಂದಕ್ಕೂ ಕಷ್ಟವಾಗುತ್ತದೆ. ಇದು ವ್ಯವಸ್ಥೆಗೆ ಒಳ್ಳೆಯದಲ್ಲ.