Site icon Vistara News

Inflation : ಸಗಟು ಹಣದುಬ್ಬರ ಕಳೆದ 3 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆ, ಈಗ ಮೈನಸ್‌ 3.48%

Retail Inflation

ನವ ದೆಹಲಿ: ದೇಶದಲ್ಲಿ ಸಗಟು ಹಣದುಬ್ಬರ (wholesale inflation) ಮೇನಲ್ಲಿ ಮೈನಸ್‌ 3.48%ಕ್ಕೆ ಇಳಿಕೆಯಾಗಿದೆ. ಕಳೆದ ಮೂರು ವರ್ಷದಲ್ಲಿಯೇ ಇದು ಕನಿಷ್ಠ ಮೊತ್ತವಾಗಿದೆ. ಏಪ್ರಿಲ್‌ನಲ್ಲಿ ಇದು -0.92% ಇತ್ತು. 2022ರ ಮೇನಲ್ಲಿ ಸಗಟು ಹಣದುಬ್ಬರ 16.63% ಇತ್ತು. ಆಹಾರ ವಸ್ತುಗಳು, ಇಂಧನ ಮತ್ತು ಉತ್ಪಾದಿತ ವಸ್ತುಗಳ ಬೆಲೆಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸಗಟು ಹಣದುಬ್ಬರ ತಗ್ಗಿದೆ. ಮೇನಲ್ಲಿ ಆಹಾರ ವಸ್ತುಗಳ ಹಣದುಬ್ಬರ 1.51%ಕ್ಕೆ ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ ಹಣದುಬ್ಬರ 3.54% ಇತ್ತು.

ಸಗಟು ದರ ಸೂಚ್ಯಂಕ ಸತತ ಎರಡನೇ ತಿಂಗಳಿಗೆ ಋಣಾತ್ಮಕ ಹಂತಕ್ಕೆ ಇಳಿದಿದೆ. ಮಿನರಲ್‌ ಆಯಿಲ್‌, ಬೇಸಿಕ್‌ ಮೆಟಲ್‌, ಕೆಮಿಕಲ್‌ ಪ್ರಾಡಕ್ಟ್ಸ್‌, ಜವಳಿ, ಆಹಾರೇತರ ವಸ್ತುಗಳ ದರ ಇಳಿಕೆಯಾಗಿದೆ. ಹೀಗಾಗಿ ಸಗಟು ಹಣದುಬ್ಬರ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ತಿಳಿಸಿದೆ. ಮೇನಲ್ಲಿ ಇಂಧನ ಮತ್ತು ವಿದ್ಯುತ್‌ ವಲಯದ ಸಗಟು ಹಣದುಬ್ಬರ ಮೈನಸ್‌ 9.17% ಕ್ಕೆ ಇಳಿಕೆಯಾಗಿದೆ. ಉತ್ಪಾದಿತ ವಸ್ತುಗಳ ಹಣದುಬ್ಬರ ಮೈನಸ್‌ 2.97%ಕ್ಕೆ ತಗ್ಗಿದೆ.

ಕಳೆದ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ (wholesale price base inflation) ಮೈನಸ್‌ 0.92%ಕ್ಕೆ ಇಳಿಕೆಯಾಗಿತ್ತು. ಸುಮಾರು ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಹೋಲ್‌ ಸೇಲ್‌ ಹಣದುಬ್ಬರ ತಗ್ಗಿತ್ತು. 2023ರ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ 1.34% ಮತ್ತು ಕಳೆದ ವರ್ಷ ಏಪ್ರಿಲ್‌ನಲ್ಲಿ 15.38% ಇತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. 2020ರ ಜುಲೈನಿಂದೀಚೆಗೆ ಸಗಟು ಹಣದುಬ್ಬರ ಋಣಾತ್ಮಕ ಮಟ್ಟಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಮೇನಲ್ಲಿ 20 ವರ್ಷದಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿದ್ದ ಸಗಟು ಹಣದುಬ್ಬರ (16.63%) ಇದೀಗ ಮೈನಸ್‌ 0.92%ಕ್ಕೆ ತಗ್ಗಿರುವುದು ಗಮನಾರ್ಹ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ರಿಟೇಲ್‌ ಹಣದುಬ್ಬರ (Retail inflation) ಕಳೆದ ಎರಡು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇದು ಮೇನಲ್ಲಿ 4.25%ಕ್ಕೆ ತಗ್ಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಗ್ರಾಹಕ ದರ ಸೂಚ್ಯಂಕ (consumer price index) ಆಧರಿತ ಹಣದುಬ್ಬರ ಆರ್‌ಬಿಐನ ಸಹಿಷ್ಣುತೆಯ ಮಟ್ಟದಲ್ಲಿ, ಅಂದರೆ 2-6% ಒಳಗೆಯೇ ಇದೆ ಎಂದು ಸೋಮವಾರ ಬಿಡುಗಡೆಯಾಗಿರುವ ಅಂಕಿ ಅಂಶಗಳು ತಿಳಿಸಿವೆ.

ಮೇನಲ್ಲಿ ಗ್ರಾಹಕ ಆಹಾರ ದರ ಸೂಚ್ಯಂಕ (consumer food price index) 2.91%ಕ್ಕೆ ಇಳಿಕೆಯಾಗಿತ್ತು. ಇದು ಏಪ್ರಿಲ್‌ನಲ್ಲಿ 3.84% ಇತ್ತು. ಗ್ರಾಮೀಣ ಹಣದುಬ್ಬರ 4.17% ಇದ್ದರೆ, ನಗರ ಪ್ರದೇಶದ ಹಣದುಬ್ಬರ 4.27% ಇತ್ತು.

ಕಳೆದ ಮೇನಲ್ಲಿ ತರಕಾರಿಗಳ ಬೆಲೆಯಲ್ಲಿ 8.1% ಇಳಿಕೆಯಾಗಿತ್ತು. ಆಹಾರ ಮತ್ತು ಪಾನೀಯಗಳ ದರ 3.29% ಇಳಿದಿತ್ತು. ಧವಸ ಧಾನ್ಯಗಳ ದರದಲ್ಲೂ ಇಳಿಕೆ ಉಂಟಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಪಿಜಿ, ಇತರ ಇಂಧನ ದರ ಇಳಿಕೆ ಕೂಡ ಸಕಾರಾತ್ಮಕ ಪ್ರಭಾವ ಬೀರಿತ್ತು. ಹೀಗಿದ್ದರೂ, ಎಲ್‌ನಿನೊ ಎಫೆಕ್ಟ್‌, ಮುಂಗಾರು ಕೊರತಯ ಸವಾಲು ಕಾಡಿದರೆ, ಹಣದುಬ್ಬರ ಮತ್ತೆ ಏರಿಕೆಯಾಗುವ ಆತಂಕ ಇದೆ.

ಇದನ್ನೂ ಓದಿ: High net worth Indians : ಈ ವರ್ಷ ದೇಶ ಬಿಡಲಿದ್ದಾರೆ 6,500 ಶ್ರೀಮಂತರು, ಚಿಂತೆ ಮಾಡಬೇಕೇ?

Exit mobile version