ನವ ದೆಹಲಿ: ಕಳೆದ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ (wholesale price base inflation) ಮೈನಸ್ 0.92%ಕ್ಕೆ ಇಳಿಕೆಯಾಗಿದೆ. ಸುಮಾರು ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಹೋಲ್ ಸೇಲ್ ಹಣದುಬ್ಬರ ತಗ್ಗಿದೆ. 2023ರ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ 1.34% ಮತ್ತು ಕಳೆದ ವರ್ಷ ಏಪ್ರಿಲ್‌ನಲ್ಲಿ 15.38% ಇತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
2020ರ ಜುಲೈನಿಂದೀಚೆಗೆ ಸಗಟು ಹಣದುಬ್ಬರ ಋಣಾತ್ಮಕ ಮಟ್ಟಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಮೇನಲ್ಲಿ 20 ವರ್ಷದಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿದ್ದ ಸಗಟು ಹಣದುಬ್ಬರ (16.63%) ಇದೀಗ ಮೈನಸ್ 0.92%ಕ್ಕೆ ತಗ್ಗಿರುವುದು ಗಮನಾರ್ಹ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Retail inflation : ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ 5.66%ಕ್ಕೆ ಇಳಿಕೆ
ಏಪ್ರಿಲ್‌ನಲ್ಲಿ ಆಹಾರ ವಸ್ತುಗಳ ಹಣದುಬ್ಬರ 3.54%ಕ್ಕೆ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ಇದು 5.48% ಇತ್ತು. ಲೋಹ, ಆಹಾರ ವಸ್ತುಗಳು, ಅದಿರು, ತೈಲ, ಜವಳಿ, ಆಹಾರೇತರ ವಸ್ತುಗಳು, ರಾಸಾಯನಿಕ, ರಬ್ಬರ್ ಮತ್ತು ಪ್ಲಾಸ್ಟಕ್ ಉತ್ಪನ್ನಗಳ ದರಗಳು ಇಳಿಕೆಯಾಗಿವೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.