ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್‌ನ ಸಿಇಒ ಸಲೀಲ್ ಪರೇಖ್ ಅವರ ವಾರ್ಷಿಕ ವೇತನ ಕಳೆದ 2021-22ರಲ್ಲಿ ಶೇ.43ರಷ್ಟು ಹೆಚ್ಚಳವಾಗಿದ್ದು, 71 ಕೋಟಿ ರೂ.ಗೆ ಜಿಗಿದಿದೆ.
ಹೀಗಿದ್ದರೂ ಸಲೀಲ್ ಪರೇಖ್ ಅವರ ಈ ವೇತನ ಪ್ಯಾಕೇಜ್‌ನಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಅವರು ಕಂಪನಿಯ ಷೇರು ಆಯ್ಕೆಯ ಮೂಲಕ ಗಳಿಸಿರುವ ಲಾಭವೂ ಸೇರಿದೆ. ಕಂಪನಿಯ ಷೇರುಗಳ ಲಾಭ ಹೆಚ್ಚಳ ಅವರ ವೇತನದ ಗಣನೀಯ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅವರು 2020-21ರಲ್ಲಿ 49.68 ಕೋಟಿ ರೂ, 2019-20 ರಲ್ಲಿ 34.27 ಕೋಟಿ ರೂ. ವೇತನ ಗಳಿಸಿದ್ದರು.
ಪರೇಖ್ ಅವರ ಸಂಬಳದಲ್ಲಿ 5.69 ಕೋಟಿ ರೂ. ಮೂಲ ವೇತನ, 0.38 ಕೋಟಿ ರೂ. ನಿವೃತ್ತಿ ಭತ್ಯೆ, 12.63 ಕೋಟಿ ರೂ. ಬೋನಸ್, 52.33 ಕೋಟಿ ರೂ. ಷೇರುಗಳ ಆಯ್ಕೆಯ ಮೂಲಕ ಗಳಿಸಿದ ಲಾಭ ಒಳಗೊಂಡಿದೆ ಎಂದು ಕಂಪನಿಯ ವಾರ್ಷಿಕ ವರದಿ ತಿಳಿಸಿದೆ.
ಭಾರತದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್‌ನ ಸಿಇಒ ರಾಜೇಶ್ ಗೋಪಿನಾಥನ್ ಅವರು 2021-22 ರಲ್ಲಿ 25.76 ಕೋಟಿ ರೂ. ವೇತನ ಗಳಿಸಿದ್ದಾರೆ. ಇನ್ಫೋಸಿಸ್‌ನ ಕಾರ್ಯಕಾರಿಯೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರು 2021-22ರಲ್ಲಿ ತಮ್ಮ ಸೇವೆಗೆ ಸ್ವಯಂ ಪ್ರೇರಿತರಾಗಿ ಯಾವುದೇ ಗೌರವ ಧನ ಸ್ವೀಕರಿಸಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರತಿಭಾವಂತ ಟೆಕ್ಕಿಗಳಿಗೆ ಭಾರಿ ಬೇಡಿಕೆ, ಎರಡಂಕಿಯಲ್ಲಿ ಸಂಬಳ ಹೆಚ್ಚಳ, ಬಡ್ತಿ