ಮುಂಬಯಿ: ಐಟಿ ದಿಗ್ಗಜ ಇನ್ಫೋಸಿಸ್ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ 5,945 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. (Infosys) ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11% ಏರಿಕೆ ದಾಖಲಿಸಿದೆ. (Infosys Q1 Results) ಇನ್ಫೋಸಿಸ್ ಈ ಅವಧಿಯಲ್ಲಿ 37,933 ಕೋಟಿ ರೂ. ಆದಾಯ ಗಳಿಸಿದೆ. 10% ಹೆಚ್ಚಳ ಕಂಡಿದೆ.
ಜಾಗತಿಕ ಆರ್ಥಿಕತೆಯ ಮಂದಗತಿ, ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಇನ್ಫೋಸಿಸ್ 2023-24 ಸಾಲಿನ ಕಂದಾಯ ಬೆಳವಣಿಗೆಯ ಮುನ್ನೋಟವನ್ನು ಕಡಿತಗೊಳಿಸಿದೆ. ಕಂಪನಿ ಪ್ರಸಕ್ತ ಸಾಲಿಗೆ ಕೇವಲ 1.3.5% ಬೆಳವಣಿಗೆಯ ಮುನ್ನೋಟವನ್ನು ಅಂದಾಜಿಸಿದೆ. ಕಳೆದ ವರ್ಷ ಇದು 4-7% ಇತ್ತು.
ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತುದಾರ ಕಂಪನಿಯಾದ ಇನ್ಫೋಸಿಸ್, ಹೀಗಿದ್ದರೂ ಆಪರೇಟಿಂಗ್ ಮಾರ್ಜಿನ್ ಗೈಡೆನ್ಸ್ ಅನ್ನು 2023-24ಕ್ಕೆ 20-22%ಕ್ಕೆ ಉಳಿಸಿದೆ. ಕಂಪನಿಯು ಜೂನ್ ತ್ರೈಮಾಸಿಕದಲ್ಲಿ 2.3 ಶತಕೋಟಿ ಡಾಲರ್ (18,860 ಕೋಟಿ ರೂ.) ಮೌಲ್ಯದ ಡೀಲ್‌ಗಳನ್ನು ಗಳಿಸಿದೆ.
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ವಲಸೆಯ ಪ್ರಮಾಣ 28.4%ಕ್ಕೆ ಏರಿಕೆ: ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಣದಲ್ಲಿ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 28.4%ಕ್ಕೆ ಹೆಚ್ಚಳವಾಗಿದೆ. ಕಂಪನಿಯಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 3,36,294 ಇತ್ತು. ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 6,940 ಕಡಿಮೆಯಾಗಿದೆ.
ಇನ್ಫೋಸಿಸ್‌ಗೆ ಹಣಕಾಸು ಸೇವೆಯಲ್ಲಿ ಅತಿ ಹೆಚ್ಚು ಆದಾಯ ಲಭಿಸಿದೆ. 4.7% ಪ್ರಗತಿ ದಾಖಲಿಸಿದೆ. ಕಮ್ಯುನಿಕೇಶನ್ ವಿಭಾಗದಲ್ಲಿ 6.1% ಇಳಿದಿದೆ. ಉತ್ಪಾದನೆ ಮತ್ತು ಜೀವ ವಿಜ್ಞಾನ ವಲಯದಿಂದ ಎರಡಂಕಿಯ ಆದಾಯ ಬೆಳವಣಿಗೆ ದಾಖಲಿಸಿದೆ. ಇನ್ಫೋಸಿಸ್‌ನ ಪ್ರತಿ ಷೇರಿನ ದರ 1449 ರೂ. ಇತ್ತು.