Site icon Vistara News

Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

Infosys

Infosys

ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ (Infosys) ನಾಲ್ಕನೇ ಹಣಕಾಸು ತ್ರೈಮಾಸಿಕದಲ್ಲಿ 7,969 ಕೋಟಿ ರೂ.ಗಳ ನಿವ್ವಳ ಲಾಭ ಪಡೆದುಕೊಂಡಿದೆ (Infosys Q4 Result). ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಪೂರೈಕೆದಾರ ಇನ್ಫೋಸಿಸ್ 6,128 ಕೋಟಿ ರೂ. ಲಾಭ ಹೊಂದಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು 37,923 ಕೋಟಿ ರೂ.ಗಳ ಆದಾಯವನ್ನು ವರದಿ ಮಾಡಿದೆ. ಇದು 2023ರ ನಾಲ್ಕನೇ ತ್ರೈಮಾಸಿಕದಲ್ಲಿದ್ದ 37,441 ಕೋಟಿ ರೂ.ಗಿಂತ 1.3% ಹೆಚ್ಚಳವನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ. 2025ರ ಹಣಕಾಸು ವರ್ಷದಲ್ಲಿ ಕಂಪೆನಿಯು ಸ್ಥಿರ ಕರೆನ್ಸಿಯಲ್ಲಿ ಶೇ. 1ರಿಂದ ಶೇ. 3ರಷ್ಟು ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ. ಕಂಪೆನಿಯು 2024ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 28 ರೂ.ಗಳ ಅಂತಿಮ ಲಾಭಾಂಶವನ್ನು ಘೋಷಿಸಿದೆ. ಇದರಲ್ಲಿ ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಡಿವಿಡೆಂಡ್‌ ಕೂಡ ಸೇರಿದೆ.

“2024ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಅಂತಿಮ ಲಾಭಾಂಶವನ್ನು ಘೋಷಿಸಲಾಗಿದೆ ಮತ್ತು ಹೆಚ್ಚುವರಿಯಾಗಿ ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಡಿವಿಡೆಂಟ್‌ ಶಿಫಾರಸು ಮಾಡಲಾಗಿದೆ” ಎಂದು ಇನ್ಫೋಸಿಸ್ ಮೂಲಗಳು ಸೆಬಿ (Securities and Exchange Board of India-SEBI)ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ತಿಳಿಸಿದೆ.

ಜುಲೈ 1ರಂದು ಪಾವತಿಸಲು ನಿರ್ಧಾರ

ಈ ಹಿಂದೆ ಘೋಷಿಸಿದ ಪ್ರತಿ ಷೇರಿಗೆ 35.5 ರೂ.ಗಳ ಲಾಭಾಂಶದೊಂದಿಗೆ 2024ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಷೇರುದಾರರಿಗೆ ಪ್ರತಿ ಷೇರಿಗೆ ಒಟ್ಟು 63.5 ರೂ. ಲಾಭಾಂಶ ದೊರೆಯಲಿದೆ. ಲಾಭಾಂಶ (ಡಿವಿಡೆಂಡ್‌)ವನ್ನು 2024ರ ಜುಲೈ 1ರಂದು ಪಾವತಿಸಲು ನಿರ್ಧರಿಸಲಾಗಿದೆ.

ಇನ್ಫೋಸಿಸ್‌ನ ಮಾರ್ಚ್ ತ್ರೈಮಾಸಿಕ ದ ವರದಿ ಪ್ರಕಟಗೊಂಡ ಬಳಿಕ ಲಾಭಾಂಶಕ್ಕೆ ಘೋಷಣೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮೊದಲು ಕಂಪೆನಿಯು 2023ರ ಅಕ್ಟೋಬರ್ 25ರಂದು ಪ್ರತಿ ಷೇರಿಗೆ 18 ರೂ.ಗಳ ಮಧ್ಯಂತರ ಲಾಭಾಂಶವನ್ನು ಘೋಷಿಸಿತ್ತು. ನಂತರ 2023ರ ಜೂನ್‌ನಲ್ಲಿ 17.5 ರೂ.ಗಳ ಅಂತಿಮ ಲಾಭಾಂಶವನ್ನು ಪ್ರಕಟಿಸಿತ್ತು.

ಇದನ್ನೂ ಓದಿ: Samsung: ಎಐ ಫೀಚರ್‌ಗಳ ನಿಯೋ ಕ್ಯೂಎಲ್ಇಡಿ 8ಕೆ, 4ಕೆ, ಒಎಲ್ಇಡಿ ಟಿವಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ದರ ಎಷ್ಟು?

ಈ ಪ್ರಕಟಣೆಯ ನಂತರ ಇನ್ಫೋಸಿಸ್ ಷೇರುಗಳು ಎನ್ಎಸ್ಇ (NSE)ಯಲ್ಲಿ 1,429.50 ರೂ.ಗೆ ಕೊನೆಗೊಂಡವು. ಅಂದರೆ 15.05 ರೂ. ಅಥವಾ ಶೇ. 1.06ರಷ್ಟು ಹೆಚ್ಚಳ ದಾಖಲಿಸಿದಂತಾಗಿದೆ. ಈ ವರ್ಷದ ಆರಂಭದಲ್ಲಿ ಶೇ. 8ರಷ್ಟು ಕುಸಿತ ದಾಖಲಿಸಿತ್ತು. ಹೆಚ್ಚುವರಿಯಾಗಿ ಕಂಪೆನಿಯು ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (ER&D)  ಸೇವೆಗಳನ್ನು ಒದಗಿಸುವ ಇನ್-ಟೆಕ್ ಹೋಲ್ಡಿಂಗ್ ಜಿಎಂಬಿಎಚ್ (In-Tech Holding GmbH) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಇನ್ಫೋಸಿಸ್ ಮಂಡಳಿಯು ಮುಂದಿನ 5 ವರ್ಷಗಳ ಬಂಡವಾಳ ಹಂಚಿಕೆ ನೀತಿಯನ್ನು ಅನುಮೋದಿಸಿದೆ. ಕಂಪೆನಿಯು ಪ್ರತಿ ಷೇರಿಗೆ ತನ್ನ ವಾರ್ಷಿಕ ಲಾಭಾಂಶವನ್ನು ಕ್ರಮೇಣ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

Exit mobile version