ಮುಂಬಯಿ: ಐಟಿ ದಿಗ್ಗಜ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮೂನ್‌ಲೈಟಿಂಗ್ ಪದ್ಧತಿಯ (Moonlighting) ಬಗ್ಗೆ ಎಚ್ಚರಿಕೆ ನೀಡಿದ್ದು, ಎರಡೆರಡು ಕಡೆ ಕೆಲಸ ಮಾಡಿದರೆ ಉದ್ಯೋಗ ಕಳೆದುಕೊಳ್ಳಬೇಕಾಗಿ ಬರಬಹುದು ಎಂದು ತಿಳಿಸಿದೆ.
ಕಂಪನಿಯಲ್ಲಿ ಇದ್ದುಕೊಂಡೇ ಮತ್ತೊಂದು ಕಂಪನಿಯ ಕೆಲಸ ಮಾಡುವುದು ಸಂಸ್ಥೆಯ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಒಂದು ವೇಳೆ ಇದು ಪತ್ತೆಯಾದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಉದ್ಯೋಗದಿಂದ ವಜಾ ಆಗುವುದರಲ್ಲಿ ಇದು ಪರ್ಯವಸಾನವಾಗಬಹುದು ಎಂದು ಇನ್ಫೋಸಿಸ್ ತನ್ನ ಸಿಬ್ಬಂದಿಗೆ ಇ-ಮೇಲ್ ಮೂಲಕ ಎಚ್ಚರಿಸಿದೆ. ಕಂಪನಿಯ ಕೆಲಸದ ಅವಧಿಯ ಹೊರತುಪಡಿಸಿಯೂ, ಇತರ ಕಂಪನಿಯ ಅಸೈನ್‌ಮೆಂಟ್‌ಗಳನ್ನು ಉದ್ಯೋಗಿಗಳು ಪಡೆಯುವಂತಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ. ಕಂಪನಿಯ ಅನುಮತಿ ಇಲ್ಲದೆ ಇತರ ಕಂಪನಿಯ ಪೂರ್ಣಕಾಲಿಕ ಅಥವಾ ಅರೆಕಾಲಿಕ ಕೆಲಸಗಳನ್ನು ಮಾಡುವಂತಿಲ್ಲ ಎಂದು ಎಚ್ಚರಿಸಿದೆ.
ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್, ಸೆಪ್ಟೆಂಬರ್ 12ರಂದು ಈ ಸಂಬಂಧ ಉದ್ಯೋಗಿಗಳಿಗೆ ಇ-ಮೇಲ್ ಕಳಿಸಿದ್ದಾರೆ. ವಿಪ್ರೊ ಅಧ್ಯಕ್ಷ ರಿಶಾದ್ ಪ್ರೇಮ್‌ಜೀ ಕೂಡ ಇತ್ತೀಚೆಗೆ ಬಹಿರಂಗವಾಗಿ ಮೂನ್‌ಲೈಟಿಂಗ್ ಬಗ್ಗೆ ಆಕ್ಷೇಪಿಸಿದ್ದರು. ಇದು ವಂಚನೆಯೇ ಸರಿ ಎಂದಿದ್ದರು. ಮ್ಯಾನೇಜರ್ ಮತ್ತು ಹಿರಿಯ ಕನ್ಸಲ್ಟೆಂಟ್ ಮಟ್ಟದ ಉದ್ಯೋಗಿಗಳಿಗೆ ಮಾತ್ರ ಇ-ಮೇಲ್ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಮೂನ್‌ಲೈಟಿಂಗ್?: ಮೂನ್‌ಲೈಟಿಂಗ್ ಪಾಲಿಸಿ (Moonligting policy) ಪರಿಕಲ್ಪನೆಯಲ್ಲಿ ಅಡಿಯಲ್ಲಿ ಸಿಬ್ಬಂದಿ ತನ್ನ ಕಂಪನಿಯ ಅನುಮತಿಯ ಮೇರೆಗೆ, ಕಚೇರಿಯ ನಿಗದಿತ ಕೆಲಸದ ಸಮಯದ ಬಳಿಕ ಅಥವಾ ವಾರಾಂತ್ಯದ ರಜೆಯಲ್ಲಿ, ಕಂಪನಿಯ ಉತ್ಪಾದಕತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಬೇರೆ ಉದ್ಯೋಗಗಳನ್ನು ಕೈಗೊಳ್ಳಬಹುದು. ಬೇರೆ ಕಂಪನಿಯಲ್ಲೂ ಕೆಲಸ ಮಾಡಬಹುದು. ಆನ್‌ಲೈನ್ ಫುಡ್ ಡೆಲಿವರಿ ವಲಯದ ಸ್ವಿಗ್ಗಿ ತನ್ನ ಉದ್ಯೋಗಿಗಳಿಗೆ ಈ ಮೂನ್‌ಲೈಟಿಂಗ್ ನೀತಿಯನ್ನು ಕಲ್ಪಿಸಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೂನ್ ಲೈಟಿಂಗ್ ಪರಿಕಲ್ಪನೆ ಕುತೂಹಲ ಮೂಡಿಸಿತ್ತು. ಕೆಲವು ಕಡೆಗಳಲ್ಲಿ ಉದ್ಯೋಗಿಗಳು ಹೆಚ್ಚುವರಿಯಾಗಿ ಬೇರೆ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್ ಫ್ರಮ್ ಹೋಮ್ ಹೆಚ್ಚು ಪ್ರಚಲಿತವಾಗಿದ್ದರಿಂದ ಮೂನ್‌ಲೈಟಿಂಗ್ ಆಕರ್ಷಕ ಎನ್ನಿಸಿತ್ತು. ಆದರೆ ಇದೀಗ ಐಟಿ ಕಂಪನಿಗಳು ಮೂನ್‌ಲೈಟಿಂಗ್ ವಿರುದ್ಧ ದನಿ ಎತ್ತುತ್ತಿವೆ.
ಇದನ್ನೂ ಓದಿ: Swiggy new offer| ಸ್ವಿಗ್ಗಿ ಸಂಸ್ಥೆಯ ಸಿಬ್ಬಂದಿಗೆ ಎರಡನೇ ಉದ್ಯೋಗ ಮಾಡಲು ಅವಕಾಶ