ಬೆಂಗಳೂರು: ಅಮೆರಿಕ ಮತ್ತು ಕೆನಡಾದಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ (work from home) ಪದ್ಧತಿಯಲ್ಲಿ ಕೆಲಸ ಮಾಡುವ ಆಯ್ಕೆಯನ್ನು ಇನ್ಫೋಸಿಸ್ ರದ್ದುಪಡಿಸಿದೆ. ಹೀಗಾಗಿ ಕಚೇರಿಗೆ ಬಂದೇ ಟೆಕ್ಕಿಗಳು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ವರ್ಕ್ ಫ್ರಮ್ ಹೋಮ್ ಮಾಡುವುದಿದ್ದರೆ ಅದಕ್ಕೆ ವಿಶೇಷ ಅನುಮತಿ ಅಗತ್ಯ ಎಂದು ಕಂಪನಿ ತಿಳಿಸಿದೆ.
ವರ್ಕ್ ಫ್ರಮ್ ಹೋಮ್ ಕುರಿತ ಕಂಪನಿಯ ಹೊಸ ನೀತಿಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇನ್ಫೋಸಿಸ್ ತಿಳಿಸಿದೆ. ಹೊಸ ನಿಯಮವು ಅಮೆರಿಕ ಮತ್ತು ಕೆನಡಾದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಅಲ್ಲಿ 30,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ಹೀಗಿದ್ದರೂ ಭಾರತದಲ್ಲಿ ಇರುವ ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡಬೇಕಾದ ಅಗತ್ಯ ಇಲ್ಲ. ಕಳೆದ ನವೆಂಬರ್‌ನಲ್ಲಿ ಉದ್ಯೋಗಿಗಳಿಗೆ ಮೂರು ಹಂತಗಳಲ್ಲಿ ಕಚೇರಿಗೆ ಮರಳಲು ಅವಕಾಶ ಕಲ್ಪಿಸಿತ್ತು. ಕಳೆದ ಫೆಬ್ರವರಿಯಲ್ಲಿ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರು ವರ್ಕ್ ಫ್ರಮ್ ಹೋಮ್‌ಗೆ ಆತುಕೊಳ್ಳಬಾರದು. ಕಚೇರಿಯಿಂದ ಕೆಲಸ ಮಾಡುವುದು ಉತ್ತಮ ಎಂದಿದ್ದರು.
ದೇಶದ ಪ್ರಮುಖ ಐಟಿ ಕಂಪನಿಗಳಲ್ಲೊಂದಾಗಿರುವ ಇನ್ಫೋಸಿಸ್, ಜನವರಿ-ಮಾರ್ಚ್ ಅವಧಿಯ ತ್ರೈಮಾಸಿಕ ಹಣಕಾಸು ( Infosys Q4 results) ಫಲಿತಾಂಶವನ್ನು ಪ್ರಕಟಿಸಿದ್ದು, 6,128 ಕೋಟಿ ರೂ. ಲಾಭ ಗಳಿಸಿದೆ. ಪ್ರತಿ ಷೇರಿಗೆ 17.50 ರೂ.ಗಳ ಡಿವಿಡೆಂಡ್ ಅನ್ನೂ ಘೋಷಿಸಿದೆ. ಲಾಭದ ಪ್ರಮಾಣದಲ್ಲಿ 7.7% ಹೆಚ್ಚಳವಾಗಿದೆ.
ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯು 5,696 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇನ್ಫೋಸಿಸ್‌ನ ಆದಾಯದಲ್ಲಿ 16% ಏರಿದ್ದು, 37,441 ಕೋಟಿ ರೂ.ಗೆ ಏರಿದೆ. ಕಳೆದ ಸಾಲಿನಲ್ಲಿ ಕಂಪನಿ 32,276 ಕೋಟಿ ರೂ. ಆದಾಯ ಗಳಿಸಿತ್ತು. ಜನವರಿ-ಮಾರ್ಚ್ ಅವಧಿಯಲ್ಲಿ ಇನ್ಫೊಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಭವು 24.3%ರಿಂದ 20.9%ಕ್ಕೆ ತಗ್ಗಿದೆ. ಫಲಿತಾಂಶವು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ದರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಷೇರು ದರ 2.79% ಇಳಿದಿತ್ತು. (1,383 ರೂ.)
ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ಸೇವೆ ರಫ್ತುದಾರ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TaTa Consultancy Services -TCS) ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 11,392 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 14.76% ಏರಿಕೆ ದಾಖಲಿಸಿದೆ. ಹಾಗೆಯೇ ಟಿಸಿಎಸ್ ಪ್ರತಿ ಷೇರಿಗೆ 24 ರೂ.ಗಳ ಡಿವಿಡೆಂಡ್ ಅನ್ನೂ ಘೋಷಿಸಿದೆ. ಇನ್ಫೋಸಿಸ್ ಜನವರಿ-ಮಾರ್ಚ್‌ನಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ 3,611 ಕಡಿತಗೊಳಿಸಿದೆ. ಒಟ್ಟಾರೆಯಾಗಿ 343,234 ಉದ್ಯೋಗಿಗಳು ಇದ್ದಾರೆ.
2022-23ರ ಸಾಲಿನಲ್ಲಿ ಟಿಸಿಎಸ್ ಪ್ರಬಲ ಬೆಳವಣಿಗೆಯನ್ನು ದಾಖಲಿಸಿದೆ. ಆರ್ಡರ್ ಬುಕ್ ಗಣನೀಯ ಬೆಳವಣಿಗೆ ದಾಖಲಿಸಿದೆ. ಇದು ಕಂಪನಿಯ ಸೇವೆಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸವನ್ನು ಬಿಂಬಿಸಿದೆ ಎಂದು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು ತಿಳಿಸಿದ್ದಾರೆ. ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು 2023ರ ಜೂನ್ 1ರಂದು ಕೆ. ಕೃತಿವಾಸನ್ ಅವರಿಗೆ ಅಧಿಕಾರ ವಹಿಸಿಕೊಡಲಿದ್ದಾರೆ. ರಿಟೇಲ್, ಸಿಪಿಜಿ, ಜೀವ ವಿಜ್ಞಾನ ಮತ್ತು ಹೆಲ್ತ್ ಕೇರ್ ವಲಯದಲ್ಲಿ ಟಿಸಿಎಸ್ ಉತ್ತಮ ಬೆಳವಣಿಗೆ ದಾಖಲಿಸಿದೆ.
ಇದನ್ನೂ ಓದಿ: TCS mass resignation : ಟಿಸಿಎಸ್‌ನಲ್ಲಿ ಮಹಿಳಾ ಟೆಕ್ಕಿಗಳ ಸಾಮೂಹಿಕ ರಾಜೀನಾಮೆ, ಕಾರಣವೇನು?