ಬೆಂಗಳೂರು: ಇನ್ಫೋಸಿಸ್ ಎರಡನೇ ಸ್ತರದ ನಗರಗಳಲ್ಲಿ ನಾಲ್ಕು ಹೊಸ ಕಚೇರಿಗಳನ್ನು ನಿರ್ಮಿಸಲಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಶಂಕರ್ ತಿಳಿಸಿದ್ದಾರೆ.
ಕೊಯಮತ್ತೂರು, ವಿಝಾಗ್, ಕೋಲ್ಕೊತಾ ಮತ್ತು ನೊಯ್ಡಾದಲ್ಲಿ ಹೊಸ ಕಚೇರಿ ಕ್ಯಾಂಪಸ್‌ಗಳನ್ನು ಇನ್ಫೋಸಿಸ್ ನಿರ್ಮಿಸಲು ಉದ್ದೇಶಿಸಿದೆ. ಈಗಾಗಲೇ ಇಂದೊರ್ ಮತ್ತು ನಾಗ್ಪುರದಲ್ಲಿ ಕಚೇರಿಯನ್ನು ಹೊಂದಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಚೇರಿಗಳನ್ನು ಹೊಂದಿರುವ ಇನ್ಫೋಸಿಸ್ ಇದೀಗ ಎರಡನೇ ಸ್ತರದ ನಗರಗಳಲ್ಲಿ ನಿರ್ಮಿಸಲು ಮುಂದಾಗಿದೆ.
ಪ್ರತಿಭಾವಂತ ಟೆಕ್ಕಿಗಳಿಗೆ ಇದರಿಂದ ಅನುಕೂಲವಾಗಲಿದೆ. ಐಟಿ ವಲಯ ಈಗ ಎರಡನೇ ಸ್ತರದ ನಗರಗಳಿಂದಲೂ ಪ್ರತಿಭಾವಂತ ಟೆಕ್ಕಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಕೋವಿಡ್ ಬಿಕ್ಕಟ್ಟಿನ ಆರಂಭದಲ್ಲಿ 60% ಮಂದಿ ಅವರವರ ಊರುಗಳಿಗೆ ತೆರಳಿದ್ದರು. ಈಗ ಮತ್ತೆ ಕಚೇರಿಗೆ ಮರಳುತ್ತಿದ್ದಾರೆ. ಆದರೆ ಎರಡನೇ ಸ್ತರದ ನಗರಗಳಲ್ಲಿ ಕಚೇರಿ ತೆರೆದರೆ ಅವರಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ. ಈ ಕಚೇರಿಗಳಲ್ಲಿ ಕನಿಷ್ಠ ಒಂದು ಸಾವಿರ ಮಂದಿ ಕೆಲಸ ಮಾಡಬಹುದು. ಮುಂದಿನ ಮೂರು ತಿಂಗಳುಗಳಲ್ಲಿ ಕಚೇರಿಗಳು ಸಿದ್ಧವಾಗಲಿದೆ ಎಂದರು.