ನವ ದೆಹಲಿ: ನೀತಿ ಆಯೋಗ ಬಿಡುಗಡೆಗೊಳಿಸಿದ ಆವಿಷ್ಕಾರ ಸೂಚ್ಯಂಕದಲ್ಲಿ (Innovation Index 2021) ಕರ್ನಾಟಕ ೨೦೨೧ರ ಸಾಲಿನಲ್ಲೂ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ತೆಲಂಗಾಣ ಎರಡನೇ ಮತ್ತು ಹರಿಯಾಣ ಮೂರನೇ ಸ್ಥಾನ ಗಳಿಸಿದೆ.
ಆವಿಸ್ಕಾರ ಸೂಚ್ಯಂಕದಲ್ಲಿ ಪ್ರಮುಖ ರಾಜ್ಯಗಳ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈಶಾನ್ಯ ರಾಜ್ಯಗಳ ಪೈಕಿ ಮಣಿಪುರ ಮೊದಲ ಸ್ಥಾನದಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ ಮೊದಲ ಸ್ಥಾನ ಗಳಿಸಿದೆ. ದಿಲ್ಲಿ ಎರಡನೇ ಸ್ಥಾನದಲ್ಲಿದೆ.
ಆವಿಷ್ಕಾರ ಸೂಚ್ಯಂಕ 2021ರಲ್ಲಿ ಪ್ರಮುಖ ರಾಜ್ಯಗಳು | ಸ್ಥಾನ |
ಕರ್ನಾಟಕ | 1 |
ತೆಲಂಗಾಣ | 2 |
ಹರಿಯಾಣ | 3 |
ಮಹಾರಾಷ್ಟ್ರ | 4 |
ತಮಿಳುನಾಡು | 5 |
ಪಂಜಾಬ್ | 6 |
ಉತ್ತರಪ್ರದೇಶ | 7 |
ಕೇರಳ | 8 |
ಆಂಧ್ರಪ್ರದೇಶ | 9 |
ಜಾರ್ಖಂಡ್ | 10 |
ಪಶ್ಚಿಮ ಬಂಗಾಳ | 11 |
ರಾಜಸ್ಥಾನ | 12 |
ಮಧ್ಯಪ್ರದೇಶ | 13 |
ಗುಜರಾತ್ | 14 |
ಬಿಹಾರ | 15 |
ಒಡಿಶಾ | 16 |
ಛತ್ತೀಸ್‌ಗಢ | 17 |
ದೇಶದ ಅಭಿವೃದ್ಧಿಗೆ ಮತ್ತು ಸ್ವಾವಲಂಬನೆಗೆ ಆವಿಷ್ಕಾರಗಳು ನಿರ್ಣಾಯಕ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆವಿಷ್ಕಾರದಲ್ಲಿ ಮುಂದುವರಿಯಬೇಕು ಎಂಬುದು ಸರ್ಕಾರದ ಅಪೇಕ್ಷೆಯಾಗಿದೆ ಎಂದು ನೀತಿ ಆಯೋಗದ ಹಿರಿಯ ಸಲಹೆಗಾರ ನೀರಜ್ ಸಿನ್ಹಾ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನದ ಪ್ರಮುಖ ತಾಣವಾಗಿರುವ ಕರ್ನಾಟಕ, ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಹೆಸರಾಂತ ಉನ್ನತ ಶಿಕ್ಷಣ ಸಂಸ್ಥೆಗಳು, ವಿಜ್ಞಾನ ಸಂಶೋಧನಾಲಯಗಳು ಇಲ್ಲಿವೆ. ಐಸಿಟಿ ಲ್ಯಾಬ್ಸ್ ( ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಹೊಂದಿರುವ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಪಿಎಚ್‌ಡಿ ಹೊಂದಿರುವವರ ಸಂಖ್ಯೆಯೂ ಗಣನೀಯ. ಸ್ಟಾರ್ಟಪ್‌ಗಳ ಸಂಖ್ಯೆ ೨೦೨೧ರಲ್ಲಿ ೧೧,೦೦೦ದಿಂದ ೧೯,೦೦೦ಕ್ಕೆ ಏರಿಕೆಯಾಗಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.