ನವ ದೆಹಲಿ: ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊ, (Reliance Jio) 5ಜಿ ನೆಟ್ ವರ್ಕ್ ವಿಸ್ತರಿಸುವ ಸಲುವಾಗಿ 1 ಲಕ್ಷ ಟೆಲಿಕಾಂ ಗೋಪುರಗಳನ್ನು ಅಳವಡಿಸಿದೆ. ಇದರ ಸಮೀಪದ ಪ್ರತಿಸ್ಪರ್ಧಿಗೆ ಹೋಲಿಸಿದರೆ ಇದು 5 ಪಟ್ಟು ಹೆಚ್ಚು. ದೂರ ಸಂಪರ್ಕ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳ ( ಮಾರ್ಚ್ 23) ಪ್ರಕಾರ, ರಿಲಯನ್ಸ್ ಜಿಯೊ 99,897 ಬಿಟಿಎಸ್ (base transceiver station) ಅನ್ನು ಅಳವಡಿಸಿದೆ. ಭಾರ್ತಿ ಏರ್‌ಟೆಲ್ 22,219 ಬಿಟಿಎಸ್‌ಗಳನ್ನು ಅಳವಡಿಸಿದೆ. 700 MHz ಮತ್ತು 3,500 MHz ತರಂಗಾಂತರಗಳ ಶ್ರೇಣಿಗಳಲ್ಲಿ ಬಿಟಿಎಸ್‌ಗಳನ್ನು ಸ್ಥಾಪಿಸಲಾಗಿದೆ.
ಪ್ರತಿ ಬೇಸ್ ಸ್ಟೇಶನ್‌ನಲ್ಲಿ ಜಿಯೊದ 3 ಸೆಲ್ ಸೈಟ್ಸ್ ಇದ್ದರೆ ಏರ್‌ಟೆಲ್‌ನ 2 ಸೆಲ್ ಇರುತ್ತದೆ ಎಂದು ದೂರಸಂಪರ್ಕ ಇಲಾಖೆಯ ವರದಿ ತಿಳಿಸಿದೆ. ಹೆಚ್ಚು ಗೋಪುರಗಳು ಮತ್ತು ಸೆಲ್ ಸೈಟ್ಸ್ ಇರುವುದರಿಂದ ಹೆಚ್ಚು ವೇಗವಾಗಿ 5ಜಿ ಸೇವೆ ನೀಡಲು ಸಾಧ್ಯ. ಓಕ್ಲಾದ ವರದಿಯ ಪ್ರಕಾರ ಜಿಯೊದ ಸ್ಪೀಡ್ 506 Mbps (megabytes per second) ಆಗಿದ್ದರೆ, ಏರ್‌ಟೆಲ್‌ನ ಸ್ಪೀಡ್ 268 Mbps ಆಗಿದೆ.
ಭಾರತದಲ್ಲಿ 50 ಕೋಟಿಗೂ ಹೆಚ್ಚು ಇಂಟರ್‌ನೆಟ್ ಬಳಕೆದಾರರಿದ್ದು, ಚೀನಾದ ಬಳಿಕ ಅತಿ ಹೆಚ್ಚು ಬಳಕೆದಾರರು ಇಲ್ಲಿದ್ದಾರೆ. 2022ರ ಅಕ್ಟೋಬರ್‌ನಲ್ಲಿ 5ಜಿ ಜಾರಿಯಾಗಿದೆ. ದೇಶದ 500 ನಗರಗಳಲ್ಲಿ ಜಿಯೊ ಮತ್ತು ಏರ್‌ಟೆಲ್‌ನ 5ಜಿ ಈಗ ಲಭ್ಯವಿದೆ.