Site icon Vistara News

Bengaluru airport | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ 3 ಫುಲ್‌ ಬಾಡಿ ಸ್ಕ್ಯಾನರ್‌ ಅಳವಡಿಕೆ

Bengaluru Airport

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಮೊದಲ ಬಾರಿಗೆ 3 ಫುಲ್‌ ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ.

ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನಲ್ಲಿ ಈ ಫುಲ್‌ ಬಾಡಿ ಸ್ಕ್ಯಾನರ್‌ಗಳು ಇವೆ. ಪ್ರಯಾಣಿಕರ ತ್ವರಿತ ತಪಾಸಣೆ ಮತ್ತು ಸುರಕ್ಷಿತ ವಿಮಾನ ಹಾರಾಟದ ದೃಷ್ಟಿಯಿಂದ ಇದು ಸಹಕಾರಿಯಾಗಲಿದೆ.

ಇದರ ಪ್ರಯೋಜನ ಏನು? ಏರ್‌ಪೋರ್ಟ್‌ನ ಸೆಕ್ಯುರಿಟಿ ಕ್ಲಿಯರೆನ್ಸ್‌ ವಿಭಾಗದದಲ್ಲಿ ಈ ಮೂರು ಫುಲ್‌ ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಮೆಟಲ್‌ ಡಿಟೆಕ್ಟರ್‌ ಚೌಕಟ್ಟು ಇರುವ ಬಾಗಿಲನ್ನು ದಾಟಿ ಒಳಗೆ ಪ್ರವೇಶಿಸಿದ ಬಳಿಕ, ಮತ್ತೆ ಎರಡನೇ ಸುತ್ತಿನಲ್ಲಿ ಭದ್ರತಾ ಸಿಬ್ಬಂದಿಯಿಂದ ಮೆಟಲ್‌ ಡಿಟೆಕ್ಟರ್‌ ಮೂಲಕ ತಪಾಸಣೆಯ ಅಗತ್ಯ ಇರುವುದಿಲ್ಲ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಟರ್ಮಿನಲ್‌ನ ಮೊದಲ ಹಂತವನ್ನು 5,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದು ಸ್ಕ್ಯಾನರ್‌ಗೂ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ರೋಹ್ಡೆ & ಸ್ಕವಾರ್ಜ್‌ ಕಂಪನಿಯಿಂದ ಖರೀದಿಸಲಾಗಿದೆ.

ಏನಿದು ಫುಲ್‌ ಬಾಡಿ ಸ್ಕ್ಯಾನರ್?

ಫುಲ್‌ ಬಾಡಿ ಸ್ಕ್ಯಾನರ್‌ ಮೂಲಕ ವ್ಯಕ್ತಿಯ ಶರೀರದ ಒಳಗೆ ಇರುವ ವಸ್ತುಗಳನ್ನು ಪತ್ತೆ ಹಚ್ಚಬಹುದು. ಭದ್ರತೆಯ ದೃಷ್ಟಿಯಿಂದ ಕೈಗೊಳ್ಳುವ ತಪಾಸಣೆಗೆ ಇದನ್ನು ಬಳಸಬಹುದು. ವ್ಯಕ್ತಿಯನ್ನು ಮುಟ್ಟದೆಯೇ, ಉಡುಪುಗಳನ್ನು ತೆಗೆಯದೆಯೇ, ಶರೀರದ ಒಳಗಿರುವ ವಸ್ತುಗಳನ್ನು ಪತ್ತೆ ಹಚ್ಚಬಹುದು. ಮೆಟಲ್‌ ಡಿಟೆಕ್ಟರ್‌ಗಳಲ್ಲಿ, ಹೆಸರೇ ಸೂಚಿಸುವಂತೆ ಲೋಹ ವಸ್ತುಗಳನ್ನು ಪತ್ತೆ ಹಚ್ಚಬಹುದು. ಆದರೆ ಫುಲ್‌ ಬಾಡಿ ಸ್ಕ್ಯಾನರ್‌ಗಲ್ಲಿ ಲೋಹೇತರ ವಸ್ತುಗಳನ್ನು ಕೂಡ ಪತ್ತೆಹಚ್ಚಬಹುದು.

Exit mobile version