Site icon Vistara News

Insurance Investment : ಹೂಡಿಕೆಯ ಲಾಭಕ್ಕಾಗಿ ವಿಮೆ ಒಳ್ಳೆಯ ಆಯ್ಕೆಯಲ್ಲ

Insurance

ಬಹುತೇಕ ಜನ ವಿಮೆಯನ್ನು ತಪ್ಪು ಕಾರಣಕ್ಕಾಗಿ ಖರೀದಿಸುತ್ತಾರೆ. ವಿಮೆ ಪ್ರೀಮಿಯಂ ಮೇಲೆ ತೆರಿಗೆ ಡಿಡಕ್ಷನ್‌ ಸೌಲಭ್ಯ ಇರುವುದರಿಂದ ಕೆಲವರು ವಿಮೆಯನ್ನು ಕೊಳ್ಳುತ್ತಾರೆ. ( Insurance Investment ) ಇನ್ನು ಕೆಲವರು ವಿಮೆ ಮತ್ತು ಹೂಡಿಕೆ ಎರಡನ್ನೂ ಮಾಡಿದಂತಾಗುತ್ತದೆ ಎಂದು ವಿಮೆಯನ್ನು ಪಡೆಯುತ್ತಾರೆ. ಆದರೆ ಹೂಡಿಕೆಯ ಲಾಭಕ್ಕಾಗಿ, ತೆರಿಗೆ ಡಿಡಕ್ಷನ್‌ಗೋಸ್ಕರ ವಿಮೆ ಖರೀದಿಸುವುದು ಉತ್ತಮ ಆಯ್ಕೆಯಾಗುವುದಿಲ್ಲ.

ವಿಮೆಯು ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಒಬ್ಬ ವ್ಯಕ್ತಿಯ ಕುಟುಂಬವನ್ನು ಹಣಕಾಸು ಸಂಕಷ್ಟಗಳಿಂದ ಪಾರು ಮಾಡುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಸಾಲ ಮಾಡಿ ಒಂದು ಪ್ರಾಪರ್ಟಿಯನ್ನು ಖರೀದಿಸುತ್ತಾನೆ. ಆದರೆ ಪ್ರಾಪರ್ಟಿ ಖರೀದಿಸುವುದಕ್ಕಿಂತ ಮೊದಲೇ ವ್ಯಕ್ತಿ ಮೃತಪಟ್ಟರೆ, ಆಗ ಬಾಕಿ ರುವ ಸಾಲವನ್ನು ಮರು ಪಾವತಿಸಲು ಕುಟುಂಬಕ್ಕೆ ಕಷ್ಟವಾದೀತು. ಪ್ರಾಪರ್ಟಿ ಕಳೆದುಕೊಳ್ಳುವ ಸಂದರ್ಭ ಬರಬಹುದು. ಆದರೆ ಅದೇ ವ್ಯಕ್ತಿ ವಿಮೆ ಮಾಡಿದ್ದರೆ, ವಿಮೆ ಕಂಪನಿಯು ವಿಮೆ ಪರಿಹಾರದ ಹಣ ನೀಡುತ್ತದೆ. ಕುಟುಂಬವು ಪ್ರಾಪರ್ಟಿಯನ್ನು ಉಳಿಸಿಕೊಳ್ಳಬಹುದು. ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ಆದರೆ ವಿಮೆಯನ್ನು ಒಂದು ಹೂಡಿಕೆಯ ಸಾಧನ ಎಂದು ವ್ಯಕ್ತಿ ಭಾವಿಸಿದಾಗ, ಆತ ತಪ್ಪಾದ ವಿಮೆಯನ್ನು ಖರೀದಿಸುವ ಸಾಧ್ಯತೆ ಇರುತ್ತದೆ.

ಮನಿ ಬ್ಯಾಕ್‌ ( Money back) ಪಾಲಿಸಿ ಎಂಬ ವಿಧವಿದೆ. ಇದರಲ್ಲಿ ಪಾಲಿಸಿದಾರರಿಗೆ ಸಾಮಾನ್ಯವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ನಿರ್ದಿಷ್ಟ ಮೊತ್ತದ ಹಣ ಸಿಗುತ್ತದೆ. ಇದು ವಿಮೆ ಕಂಪನಿಗಳು ಮಾರಾಟ ಮಾಡುವ ಅತ್ಯಂತ ಜನಪ್ರಿಯ ಯೋಜನೆಗಳಲ್ಲೊಂದು. ವಿಮೆ ಏಜೆಂಟರಿಗೂ ಮನಿ ಬ್ಯಾಕ್‌ ಪಾಲಿಸಿಗಳನ್ನು ಆಕರ್ಷಕವಾಗಿ ಪಾಲಿಸಿದಾರರ ಎದುರು ವಿವರಿಸುತ್ತಾರೆ. ಇನ್ಷೂರೆನ್ಸ್‌ ಜತೆಗೆ ಇನ್ವೆಸ್ಟ್‌ಮೆಂಟ್‌ನ ಬೆನಿಫಿಟ್‌ಗಳೂ ಸಿಗುತ್ತದೆ ಎಂದು ಜನರೂ ಮರುಳಾಗಿ ಅದನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಇದು ಖರೀದಿಗೆ ಯೋಗ್ಯವಾದ ಪಾಲಿಸಿಯಲ್ಲ. ಆದರೆ ನೀವು ವಿಮೆ ಮತ್ತು ಹೂಡಿಕೆಯ ಉದ್ದೇಶಗಳನ್ನು ಪ್ರತ್ಯೇಕವಾಗಿ ಪರಿಗಣಿಸಿದರೇ ಲಾಭ ಹೆಚ್ಚು. ಎರಡನ್ನೂ ಮಿಕ್ಸ್‌ ಮಾಡಿದರೆ, ವಿಮೆಯ ನೈಜ ಉದ್ದೇಶ ಈಡೇರುವುದಿಲ್ಲ. ಹೂಡಿಕೆಯ ನಿಜವಾದ ಲಾಭವೂ ಸಿಗುವುದಿಲ್ಲ. ನೀವು ಅಪ್ಪಟ ವಿಮೆ ಮತ್ತು ಅಪ್ಪಟ ಹೂಡಿಕೆಯ ಸಾಧನವನ್ನು ಖರೀದಿಸಿದರೆ, ಅವೆರಡರ ಲಾಭವೂ ನಿಮ್ಮದಾಗುತ್ತದೆ. ಜತೆಗೆ ಸ್ವಲ್ಪ ಹೆಚ್ಚುವರಿ ಹಣವೂ ಉಳಿಯುತ್ತದೆ.

ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ಹಣ ಉಳಿತಾಯ ಮಾಡಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ನೀವು ನಿರ್ದಿಷ್ಟ ವಿಮೆ ಕವರೇಜ್‌ ಸಲುವಾಗಿ ಮನಿ ಬ್ಯಾಕ್‌ ಪಾಲಿಸಿಯನ್ನು ಖರೀದಿಸುವ ಬದಲಿಗೆ ಟರ್ಮ್‌ ಇನ್ಷೂರೆನ್ಸ್‌ ಅಥವಾ ಸಮಗ್ರ ಜೀವ ವಿಮೆಯನ್ನು ಖರೀದಿಸಿದರೆ (ಹೋಲ್‌ ಲೈಫ್‌ ಇನ್ಷೂರೆನ್ಸ್‌ ಪಾಲಿಸಿ) ಅಗ್ಗದ ಪ್ರೀಮಿಯಂ ವೆಚ್ಚದಲ್ಲಿ ವಿಮೆ ಪಡೆಯುತ್ತೀರಿ. ನೀವು ಮನಿ ಬ್ಯಾಕ್‌ ಪಾಲಿಸಿ ಬದಲು ಬೇರೆ ಯಾವುದಾದರೂ ಹೂಡಿಕೆಯ ಸಾಧನದಲ್ಲಿ ಹೆಚ್ಚು ಲಾಭ ಪಡೆಯಬಹುದು. ನೀವು ಪ್ರತಿ ವರ್ಷ ಪ್ರೀಮಿಯಂಗೆ ನಿರ್ದಿಷ್ಟ ಹಣವನ್ನು ತೆಗೆದಿಡುತ್ತೀರಿ. ಆದರೆ ನೀವು ಅದರಲ್ಲಿ ಒಂದಷ್ಟು ಹಣ ವಾಪಸ್‌ ಸಿಗಬೇಕು ಎಂದೂ ನಿರೀಕ್ಷಿಸುತ್ತಿದ್ದರೆ, ಹೋಲ್‌ ಲೈಫ್‌ ಇನ್ಷೂರೆನ್ಸ್‌ ಪಾಲಿಸಿಯ ಮೂಲಕ ಮನಿ ಬ್ಯಾಕ್‌ ಪಾಲಿಸಿಯಲ್ಲಿ ಸಿಗುವುದಕ್ಕಿಂತ ಹೆಚ್ಚು ಹಣವನ್ನು ಗಳಿಸಬಹುದು. ಆದರೆ ವಿಮೆ ಏಜೆಂಟರು ಸಾಮಾನ್ಯವಾಗಿ ಮನಿ ಬ್ಯಾಕ್‌ ಪಾಲಿಸಿಗಳನ್ನು ಹೆಚ್ಚು ಪುಷ್‌ ಮಾಡುತ್ತಾರೆ. ಏಕೆಂದರೆ ಅವರಿಗೆ ಅದರಲ್ಲಿ ಹೆಚ್ಚು ಕಮೀಶನ್‌ ಸಿಗುತ್ತದೆ. ಆದ್ದರಿಂದ ನಿಮ್ಮ ಅಗತ್ಯಕ್ಕೆ ಹೆಚ್ಚು ಸೂಕ್ತ ಆಗುವ ವಿಮೆ ಪಾಲಿಸಿಗಳನ್ನು ಖರೀದಿಸುವುದು ಸೂಕ್ತ.

Exit mobile version