ಮುಂಬಯಿ: ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿನ ೧೭ ಸಹಕಾರ ಬ್ಯಾಂಕ್‌ಗಳ ಅರ್ಹ ಠೇವಣಿದಾರರಿಗೆ ಡಿಪಾಸಿಟ್ ಇನ್ಷೂರೆನ್ಸ್ & ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC), ಅಕ್ಟೋಬರ್‌ನಲ್ಲಿ ಠೇವಣಿಗೆ ಸಂಬಂಧಿಸಿದ ವಿಮೆ ಪರಿಹಾರವನ್ನು ನೀಡಲಿದೆ.
ಕರ್ನಾಟಕದ ಮಸ್ಕಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಮತ್ತು ತುಮಕೂರಿನ ಶ್ರೀ ಶಾರದಾ ಮಹಿಳಾ ಸಹಕಾರ ಬ್ಯಾಂಕ್‌ನ ಅರ್ಹ ಠೇವಣಿದಾರರಿಗೆ ವಿಮೆ ಪರಿಹಾರದ ಹಣ ಸಿಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ೧೭ ಸಹಕಾರ ಬ್ಯಾಂಕ್‌ಗಳಿಗೆ ಕಳೆದ ಜುಲೈನಲ್ಲಿ ಠೇವಣಿದಾರರ ಹಿತಾಸಕ್ತಿ ದೃಷ್ಟಿಯಿಂದ, ಠೇವಣಿ ಹಿಂತೆಗೆತಕ್ಕೆ ಸೇರಿದಂತೆ ವ್ಯವಹಾರಗಳಿಗೆ ನಿರ್ಬಂಧಿಸಿತ್ತು. ಈ ಸಹಕಾರ ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದ್ದುದು ಇದಕ್ಕೆ ಕಾರಣ. ಈ ೧೭ ಸಹಕಾರ ಬ್ಯಾಂಕ್‌ಗಳ ಪೈಕಿ ೮ ಬ್ಯಾಂಕ್‌ಗಳು ಮಹಾರಾಷ್ಟ್ರ ಮೂಲದ್ದಾಗಿವೆ. ೪ ಉತ್ತರಪ್ರದೇಶ, ಎರಡು ಕರ್ನಾಟಕ ಮತ್ತು ಹೊಸದಿಲ್ಲಿ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಮೂಲದ ಬ್ಯಾಂಕ್ ಆಗಿದೆ.
ಡಿಐಸಿಜಿಸಿ, ಆರ್‌ಬೀಐ ಅಧೀನದ ಸಂಸ್ಥೆಯಾಗಿದ್ದು, ಬ್ಯಾಂಕ್‌ಗಳು ವಿಫಲವಾದಾಗ, ಠೇವಣಿದಾರರಿಗೆ ೫ ಲಕ್ಷ ರೂ. ತನಕ ವಿಮೆ ಸೌಕರ್ಯವನ್ನು ಒದಗಿಸುತ್ತದೆ.
ಮಹಾರಾಷ್ಟ್ರದ ಬ್ಯಾಂಕ್‌ಗಳು: ಸಾಹೇಬ್ರಾವ್ ದೇಶ್‌ಮುಖ್ ಕೋಪರೇಟಿವ್ ಬ್ಯಾಂಕ್, ಸಾಂಗ್ಲಿ ಸಹಕಾರಿ ಬ್ಯಾಂಕ್, ರಾಯ್‌ಗಢ್ ಸಹಕಾರಿ ಬ್ಯಾಂಕ್, ನಾಸಿಕ್ ಜಿಲ್ಲಾ ಗಿರ್ನಾ ಸಹಕಾರಿ ಬ್ಯಾಂಕ್, ಸಾಯಿಬಾಬಾ ಜನತಾ ಸಹಕಾರಿ ಬ್ಯಾಂಕ್, ಅಂಜನ್‌ಗಾಂವ್ ಸುರ್ಜಿ ನಗರಿ ಸಹಕಾರಿ ಬ್ಯಾಂಕ್, ಜೈಪ್ರಕಾಶ್ ನಾರಾಯಣ್ ನಗರಿ ಸಹಕಾರಿ ಬ್ಯಾಂಕ್, ಕರ್ಮಾಲಾ ಅರ್ಬನ್ ಕೋಪರೇಟಿವ್ ಬ್ಯಾಂಕ್.
ಠೇವಣಿದಾರರಿಗೆ ಗರಿಷ್ಠ ೫ ಲಕ್ಷ ರೂ. ಲಭ್ಯ: ಡಿಐಸಿಜಿಸಿಯಿಂದ ಬ್ಯಾಂಕ್ ಠೇವಣಿದಾರರಿಗೆ ಅವರ ಠೇವಣಿಯ ಮೊತ್ತವನ್ನು ಆಧರಿಸಿ, ಗರಿಷ್ಠ ೫ ಲಕ್ಷ ರೂ. ತನಕ ವಿಮೆ ಪರಿಹಾರ ಸಿಗಲಿದೆ. ಠೇವಣಿದಾರರು ವಿಮೆ ಕ್ಲೇಮ್ ಮಾಡಿಕೊಳ್ಳಲು ಪೂರಕ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಪರ್ಯಾಯ ಬ್ಯಾಂಕ್ ಖಾತೆಯ ವಿವರವನ್ನೂ ಡಿಐಸಿಜಿಸಿಗೆ ಕೊಡಬೇಕಾಗುತ್ತದೆ. ಆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಒಂದು ವೇಳೆ ೫ ಲಕ್ಷ ರೂ.ಗಿಂತ ಹೆಚ್ಚು ಠೇವಣಿ ಬ್ಯಾಂಕಿನಲ್ಲಿದ್ದರೂ, ಗರಿಷ್ಠ ಪರಿಹಾರ ೫ ಲಕ್ಷ ರೂ. ಮಾತ್ರ ಸಿಗಲಿದೆ. ಡಿಐಸಿಜಿಸಿಯ ಠೇವಣಿ ವಿಮೆ ವ್ಯವಸ್ಥೆಯು ಎಲ್ಲ ವಾಣಿಜ್ಯೋದ್ದೇಶದ ಬ್ಯಾಂಕ್, ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತದೆ.
ಬ್ಯಾಂಕ್ ದಿವಾಳಿಯಾದಾಗ, ಯಾವುದೇ ಯೋಜನೆಯಡಿ ಪುನಾರಚನೆಯಾದಾಗ, ಮತ್ತೊಂದು ಬ್ಯಾಂಕ್ ಜತೆ ವಿಲೀನವಾದಾಗ ಠೇವಣಿದಾರರಿಗೆ ೫ ಲಕ್ಷ ರೂ. ತನಕ ವಿಮೆ ಪರಿಹಾರವನ್ನು ನೀಡುತ್ತದೆ.