ಹೊಸದಿಲ್ಲಿ: ಆರ್‌ಬಿಐ ರೆಪೊ ದರವನ್ನು ಮೇ 4ರಂದು ಶೇ.0.40ರಷ್ಟು ಏರಿಸಿದ ಬೆನ್ನಲ್ಲೇ ಹಲವಾರು ಪ್ರಮುಖ ಬ್ಯಾಂಕ್‌ಗಳು ರೆಪೊ ದರಕ್ಕೆ ಲಿಂಕ್ ಆಗಿರುವ ಗೃಹ ಸಾಲದ ಬಡ್ಡಿ ದರವನ್ನು ಏರಿಸಿವೆ.
ಐಸಿಐಸಿಐ ಬ್ಯಾಂಕ್ ತನ್ನ ಇಬಿಎಲ್‌ಆರ್ ಆಧಾರಿತ ಗೃಹ ಸಾಲ ದರವನ್ನು ಶೇ.8.1ಕ್ಕೆ ಏರಿಸಿದೆ. ಬ್ಯಾಂಕ್ ಆಫ್ ಬರೋಡಾ ರೆಪೊ ಆಧಾರಿತ ಗೃಹ ಸಾಲ ಬಡ್ಡಿ ದರವನ್ನು 6.9ಕ್ಕೆ ಏರಿಸಿದೆ. ಈ ಎರಡೂ ಬ್ಯಾಂಕ್‌ಗಳು ಮೇ 5ರಂದೇ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಎಚ್‌ಡಿಎಫ್‌ಸಿ ಮೇ 9ರಿಂದ ಅನ್ವಯವಾಗುವಂತೆ ಬಡ್ಡಿ ದರಗಳನ್ನು ಹೆಚ್ಚಿಸಿದೆ.
ಎಚ್‌ಡಿಎಫ್‌ಸಿ ಶನಿವಾರ ತನ್ನ ಗೃಹ ಸಾಲ ಬಡ್ಡಿ ದರದಲ್ಲಿ ಶೇ.0.30 ಏರಿಸಿದೆ. ಎಚ್‌ಡಿಎಫ್‌ಸಿಯಲ್ಲಿ 30 ಲಕ್ಷ ರೂ. ತನಕದ ಗೃಹ ಸಾಲಕ್ಕೆ ಹಳೆಯ ಬಡ್ಡಿ ದರ ಶೇ.6.80 ಆಗಿದ್ದರೆ ಪರಿಷ್ಕೃತ ದರ ಶೇ.7.10 ಆಗಿದೆ. ಮಹಿಳೆಯರಿಗೆ ಶೇ.6.75ರಿಂದ ಶೇ.7.05ಕ್ಕೆ ಏರಿಕೆಯಾಗಿದೆ.
30-75 ಲಕ್ಷ ರೂ. ತನಕ ಗೃಹ ಸಾಲಕ್ಕೆ ಮಹಿಳೆಯರಿಗೆ ಶೇ.7ರಿಂದ ಶೇ.7.30ಕ್ಕೆ ಏರಿಕೆಯಾಗಿದೆ. ಇತರರಿಗೆ ಶೇ.7.05ರಿಂದ ಶೇ.7.35ಕ್ಕೆ ಹೆಚ್ಚಳವಾಗಿದೆ. 75 ಲಕ್ಷ ರೂ.ಗಿಂತ ಹೆಚ್ಚಿನ ಸಾಲಕ್ಕೆ ಇತರರಿಗೆ ಶೇ.7.15ರಿಂದ ಶೇ.7.45ಕ್ಕೆ ಹಾಗೂ ಮಹಿಳೆಯರಿಗೆ ಶೇ.7.10ರಿಂದ ಶೇ.7.40ಕ್ಕೆ ವೃದ್ಧಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಮೇ 2 ಮತ್ತು 4ರ ನಡುವೆ ನಡೆಸಿದ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಶೇ.0.40ರಷ್ಟು ಏರಿಸಿದೆ. ಇದರ ಪರಿಣಾಮ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಏರಿಕೆಯಾಗಿ ಉಳಿತಾಯಗಾರರಿಗೆ ಪ್ರಯೋಜನವಾಗಲಿದೆ. ಆದರೆ ನಿಮ್ಮ ಗೃಹ ಸಾಲಗಳ ಇಎಂಐ ಎಷ್ಟು ಹೆಚ್ಚಳವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದೀರಾ? ಇಲ್ಲಿದೆ ವಿವರ.
ಇದನ್ನು ಓದಿ | ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿ ದರ ಏರಿಕೆ ಮಂತ್ರ
ಗೃಹ ಸಾಲದ ಮೊತ್ತ 30 ಲಕ್ಷ ರೂ.
ಅವಧಿ | 20 ವರ್ಷಗಳು |
ಈಗಿನ ಬಡ್ಡಿ ದರ | 6.75% |
ಈಗಿನ ಇಎಂಐ | 22,811 ರೂ. |
ಹೊಸ ಬಡ್ಡಿ ದರ | 7.15% |
ಇಎಂಐನಲ್ಲಿ ಹೆಚ್ಚಳ | 719 ರೂ. |
ಸಾಲದ ಮೊತ್ತ 50 ಲಕ್ಷ ರೂ.
- ಅವಧಿ: 20 ವರ್ಷಗಳು
- ಈಗಿನ ಬಡ್ಡಿ ದರ: ಶೇ.6.70
- ಈಗಿನ ಇಎಂಐ: 38,018 ರೂ.
- ಹೊಸ ಬಡ್ಡಿ ದರ: ಶೇ. 7.10
- ಹೊಸ ಇಎಂಐ: 39,066 ರೂ.
- ಇಎಂಐನಲ್ಲಿ ಹೆಚ್ಚಳ: 1,196 ರೂ