Site icon Vistara News

RBI Interest rate hike | ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಬಡ್ಡಿ ದರದಲ್ಲಿ 0.50% ಏರಿಕೆ ಘೋಷಣೆ

rbi governer

ಮುಂಬಯಿ : ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರೀಕ್ಷೆಯಂತೆ ರೆಪೊ ದರವನ್ನು 5.9%ಕ್ಕೆ ಏರಿಸಿದೆ. ಅಂದರೆ 0.50% ಹೆಚ್ಚಳ ಮಾಡಿದ್ದು, ರೆಪೊ ದರ ಆಧಾರಿತ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲಗಳ (RBI Interest rate hike) ಇಎಂಐ ದುಬಾರಿಯಾಗಲಿದೆ. ಇದರೊಂದಿಗೆ ಆರ್‌ಬಿಐ ಸತತ ನಾಲ್ಕನೇ ಬಾರಿಗೆ ಬಡ್ಡಿ ದರವನ್ನು ಏರಿಸಿದಂತಾಗಿದೆ.

ಆರ್‌ ಬಿಐ 2022-23 ರ ಸಾಲಿನ ಜಿಡಿಪಿ ಮುನ್ನೋಟವನ್ನೂ 7%ಕ್ಕೆ ಅಂದಾಜಿಸಿದೆ. ಹಣದುಬ್ಬರವನ್ನು ನಿಗ್ರಹಿಸಲು ಹಾಗೂ ಜಾಗತಿಕ ಆರ್ಥಿಕ ವಿಪ್ಲವಗಳನ್ನು ಎದುರಿಸಲು ಬಡ್ಡಿ ದರ ಏರಿಕೆ ಅನಿವಾರ್ಯ ಎಂದು ಆರ್‌ಬಿಐ ತಿಳಿಸಿದೆ. ಪ್ರಸಕ್ತ ಸಾಲಿನಲ್ಲಿ ಹಣದುಬ್ಬರ 6.7% ಇರಬಹುದು ಎಂದು ಅಂದಾಜಿಸಿದೆ. ಹಾಗೂ ಕಚ್ಚಾ ತೈಲ ದರದ ಸರಾಸರಿಯನ್ನು ಬ್ಯಾರೆಲ್‌ಗೆ 100 ಡಾಲರ್‌ಗೆ ಅಂದಾಜಿಸಿದೆ.

ಆರ್‌ಬಿಐನ ಹಣಕಾಸು ಸಮಿತಿಯು ಬಡ್ಡಿ ದರ ಪರಿಷ್ಕರಣೆಯನ್ನು ನಿರ್ಧರಿಸಿದೆ. ಈ ಸಮಿತಿಯಲ್ಲಿ ಆರ್‌ಬಿಐನ ಮೂವರು ಸದಸ್ಯರು ಹಾಗೂ ಹೊರಗಿನ ಮೂವರು ಸದಸ್ಯರು ಇರುತ್ತಾರೆ. 6 ಸದಸ್ಯರ ಪೈಕಿ ಐವರು ಬಡ್ಡಿ ದರ ಏರಿಕೆಗೆ ಸಮ್ಮತಿಸಿದರು. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಕಳೆದ ಮೇ ತಿಂಗಳಿನಿಂದ 1.90% ರಷ್ಟು ಬಡ್ಡಿ ದರ ಏರಿಸಿದೆ. ಸಮಿತಿಯಲ್ಲಿ ಶಶಿಕಾಂತ ಭಿಡೆ, ಜಯಂತ್‌ ವ್ಮಾ, ರಾಜೀವ್‌ ರಂಜನ್‌, ಮೈಕೆಲ್‌ ದೇಬಬ್ರತ ಪಾತ್ರ ಮತ್ತು ಶಕ್ತಿಕಾಂತ ದಾಸ್‌ ಅವರು 0.50% ಬಡ್ಡಿ ದರ ಏರಿಕೆಗೆ ಅನುಮೋದಿಸಿದರು. ಅಸೀಮಾ ಗೋಯೆಲ್‌ 0.35% ಹೆಚ್ಚಳಕ್ಕೆ ಬೆಂಬಲಿಸಿದ್ದರು.

6 ತಿಂಗಳಿನಲ್ಲಿ 1.90% ಬಡ್ಡಿ ದರ ಹೆಚ್ಚಳ: ಈ ಹಿಂದೆ ಆರ್‌ಬಿಐ 2022ರ ಮೇನಲ್ಲಿ 0.40%, ಜೂನ್‌ ಮತ್ತು ಆಗಸ್ಟ್‌ನಲ್ಲಿ ತಲಾ 0.50% ಬಡ್ಡಿ ದರ ಏರಿಕೆ ಮಾಡಿತ್ತು. ಇದೀಗ ನಾಲ್ಕನೇ ಸಲ 0.50% ಏರಿಸಿದೆ. ಇದರೊಂದಿಗೆ ಕಳೆದ ಮೇನಿಂದ ಒಟ್ಟು 1.90% ಬಡ್ಡಿ ದರ ಏರಿಸಿದಂತಾಗಿದೆ. ಮಾರುಕಟ್ಟೆಗಳೂ 0.50% ಬಡ್ಡಿ ದರ ಹೆಚ್ಚಳವನ್ನು ನಿರೀಕ್ಷಿಸಿತ್ತು.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಂದಿನ ಹಣಕಾಸು ನೀತಿ ಪರಾಮರ್ಶೆ 2022ರ ಡಿಸೆಂಬರ್‌ 5-7ಕ್ಕೆ ನಡೆಯಲಿದೆ.

Exit mobile version