ಮುಂಬಯಿ: ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 337 ಅಂಕ ಕಳೆದುಕೊಂಡು 59,119ಕ್ಕೆ ದಿನದ ವಹಿವಾಟು (Sensex) ಮುಕ್ತಾಯಗೊಳಿಸಿತು. ನಿಫ್ಟಿ 88 ಅಂಕ ನಷ್ಟದಲ್ಲಿ 17,629 ಕ್ಕೆ ಸ್ಥಿರವಾಯಿತು.
ಮಾರುಕಟ್ಟೆಯ ನಿರೀಕ್ಷೆಯಂತೆ ಅಮೇರಿಕ ಫೆಡರಲ್ ರಿಸರ್ವ್, ಶೇ.0.75ರಷ್ಟು ಬಡ್ಡಿದರವನ್ನು ಏರಿಸಿದ್ದು ಮತ್ತು ಇದೇ ವರ್ಷದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಪುನಃ ಬಡ್ಡಿದರವನ್ನು ಏರಿಸಲಾಗುವುದು ಎಂದು ಬ್ಯಾಂಕಿನ ಗರ್ವನರ್ ಜರೋಮ್ ಫೌಲ್ ಹೇಳಿಕೆ ನೀಡಿದ್ದರಿಂದ ಅಮೇರಿಕಾದ ಮಾರುಕಟ್ಟೆ ಕುಸಿಯಿತು. ಇದು ಜಗತ್ತಿನ ಎಲ್ಲಾ ಷೇರುಪೇಟೆಗಳ ಮೇಲೂ ಪ್ರಭಾವ ಬೀರಿತು. ಭಾರತದ ಮಾರುಕಟ್ಟೆಯ ಮೇಲೂ ಇದರ ಪರಿಣಾಮ ಉಂಟಾಗಿ ಅಲ್ಪ ಇಳಿಕೆಯೊಂದಿಗೆ ಮಾರುಕಟ್ಟೆ ವಹಿವಾಟು ಆರಂಭಿಸಿತು.
ಎಫ್ಎಂಸಿಜಿ, ಮಾಧ್ಯಮ ಮತ್ತು ವಾಹನ ವಲಯದ ಷೇರುಗಳು ಏರಿಕೆ ಕಂಡರೆ, ಬ್ಯಾಂಕಿಂಗ್, ಸೇವಾಕ್ಷೇತ್ರ ಮತ್ತು ಇಂಧನ ವಲಯದ ಷೇರುಗಳು ಇಳಿಕೆ ಕಂಡವು. ಐಟಿ ದಿಗ್ಗಜ ಕಂಪನಿ ಇನ್ಫೋಸಿಸ್ ಕಂಪನಿ ಇಂದು 52 ವಾರಗಳ ಇಳಿಕೆ ದಾಖಲಿಸಿತು.
ರೂಪಾಯಿ ಸಾರ್ವಕಾಲಿಕ ಅಪಮೌಲ್ಯ
ಅಮೇರಿಕಾದ ಡಾಲರ್ ಎದುರು ರೂಪಾಯಿ ಇಂದು ಸಹ ಭಾರಿ ಅಪಮೌಲ್ಯ ಕಂಡು ಸಾರ್ವಕಾಲಿಕ ಇಳಿಕೆ ದಾಖಲಿಸಿತು. ಡಾಲರ್ ಎದುರು ರೂ. 80.86 ರಲ್ಲಿ ವಹಿವಾಟು ನಡೆಸುತ್ತಿದೆ. ರೂಪಾಯಿ ಅಪಮೌಲ್ಯವನ್ನು ತಡೆಗಟ್ಟಲು ಭಾರತದ ರಿಸರ್ವ ಬ್ಯಾಂಕ್ ಮೇಲೆ ಒತ್ತಡವಿದ್ದು ಸೆಪ್ಟೆಂಬರ್ 30 ರಂದು ಶೇ. 0.35 ರಿಂದ ಶೇ 0.50 ಬಡ್ಡಿದರ ಏರಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ, ಬಂಗಾರ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆ ಕಾಣುತ್ತಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಸಹ ಶೇ 0.50 ರಷ್ಟು ಬಡ್ಡಿದರವನ್ನು ಏರಿಕೆ ಮಾಡಿದೆ.