Site icon Vistara News

Interest rate hike | ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಅತ್ಯಲ್ಪ ಏರಿಕೆ, ಹೂಡಿಕೆದಾರರಿಗೆ ನಿರಾಸೆ

small savings

ನವ ದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ (Interest rate hike) ಅಲ್ಪ ಪ್ರಮಾಣದ ಏರಿಕೆಯನ್ನು ಗುರುವಾರ ಪ್ರಕಟಿಸಿದೆ. ಅಕ್ಟೋಬರ್‌ 1 ರಿಂದ ಡಿಸೆಂಬರ್‌ ಅಂತ್ಯದ ತನಕದ ತ್ರೈಮಾಸಿಕ ಅವಧಿಗೆ ಈ ಪರಿಷ್ಕೃತ ಬಡ್ಡಿ ದರಗಳು ಅನ್ವಯಿಸಲಿವೆ.

ಕಿಸಾನ್‌ ವಿಕಾಸ ಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಎರಡು ಹಾಗೂ ಮೂರು ವರ್ಷಗಳ ಟೈಮ್‌ ಡಿಪಾಸಿಟ್‌ಗಳ ಬಡ್ಡಿ ದರಗಳಲ್ಲಿ 0.1%ರಿಂದ 0.3% ತನಕ ಪರಿಷ್ಕರಿಸಿದೆ. ಇದರೊಂದಿಗೆ ಅಂಚೆ ಕಚೇರಿಯಲ್ಲಿ ಮೂರು ವರ್ಷ ಅವಧಿಯ ಠೇವಣಿಗೆ 5.8 % ಬಡ್ಡಿ ಸಿಗಲಿದೆ. ಈ ಹಿಂದೆ 5.5% ಸಿಗುತ್ತಿತ್ತು. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರವು 7.4%ರಿಂದ 7.6%ಕ್ಕೆ ಏರಿಕೆಯಾಗಿದೆ.

ಹೀಗಿದ್ದರೂ, ಸಾರ್ವಜನಿಕ ಭವಿಷ್ಯನಿಧಿ (7.1%), ಸುಕನ್ಯಾ ಸಮೃದ್ಧಿ (7.6%), ರಾಷ್ಟ್ರೀಯ ಉಳಿತಾಯ ಪತ್ರ (6.8%), 5 ವರ್ಷಗಳ ಅವಧಿಯ ರಿಕರಿಂಗ್‌ ಮತ್ತು ಟೈಮ್‌ ಡಿಪಾಸಿಟ್‌ ( ಅನುಕ್ರಮವಾಗಿ 5.8% ಮತ್ತು 6.7%) ಬಡ್ಡಿ ದರಗಳಲ್ಲಿ ವ್ಯತ್ಯಾಸವಾಗಿಲ್ಲ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರಿ ಸಾಲಪತ್ರಗಳ (G-secs) ಆದಾಯದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.

ಹೂಡಿಕೆದಾರರಿಗೆ ನಿರಾಸೆ: ಆರ್‌ಬಿಐ ರೆಪೊ ದರ ಏರಿಕೆಯ ಬಳಿಕ ಬ್ಯಾಂಕ್‌ಗಳಲ್ಲಿ ಎಫ್‌ಡಿ ದರ ಪರಿಷ್ಕರಣೆಯಾಗಿತ್ತು. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲೂ ಹೆಚ್ಚಳವಾಗಬಹುದು ಎಂದು ಹೂಡಿಕೆದಾರರು ನಿರೀಕ್ಷಿಸಿದ್ದರು. ಆದರೆ ಪಿಪಿಎಫ್‌, ಸುಕನ್ಯಾ ಸಮೃದ್ಧಿ, ಎನ್‌ಎಸ್‌ಇ ಇತ್ಯಾದಿ ಜನಪ್ರಿಯ ಯೋಜನೆಗಳ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿದಿರುವುದು ಅವರಲ್ಲಿ ನಿರಾಸೆ ಮೂಡಿಸಿದೆ.

Exit mobile version