ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿಯ ಸಭೆ ಬುಧವಾರ ಮುಕ್ತಾಯವಾಗಲಿದ್ದು, (ಡಿ.7) ಬಡ್ಡಿ ದರ ಏರಿಕೆಯ (Interest rate) ಸಾಧ್ಯತೆ ಇದೆ.
ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಕಳೆದ ಜೂನ್ ಬಳಿಕ ಮೂರು ಸಲ ಬಡ್ಡಿ ದರವನ್ನು ಏರಿಸಿತ್ತು. ಪ್ರಸಕ್ತ ಸಾಲಿನ ಅಂತ್ಯದ ವೇಳೆಗೆ ರೆಪೊ ದರ 6.5%ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ರೆಪೊ ದರ ಎಂದರೆ, ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ನೀಡುವ ಬಡ್ಡಿ ದರ. ಈ ಹಣವನ್ನು ಬ್ಯಾಂಕ್‌ಗಳು ಸಾಲದ ವಹಿವಾಟಿಗೆ ಬಳಸುತ್ತವೆ.
ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಡ್ಡಿ ದರ ಏರಿಸುವ ಸಾಧ್ಯತೆ ಇದೆ. ಎರಡನೆಯದಾಗಿ ಇದುವರೆಗಿನ ಬಡ್ಡಿ ದರ ಹೆಚ್ಚಳದಿಂದ ಅಭಿವೃದ್ಧಿಗೆ ತೊಡಕಾಗಿಲ್ಲ. ಹೀಗಾಗಿ ಬಡ್ಡಿ ದರ ಏರಿಕೆ ನಿರೀಕ್ಷಿಸಬಹುದು ಎನ್ನುತ್ತಾರೆ ತಜ್ಞರು.
ಕಳೆದ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಜಿಡಿಪಿ ಮೌಲ್ಯ 75.02 ಲಕ್ಷ ಕೋಟಿ ರೂ. ಇದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 68.36 ಲಕ್ಷ ಕೋಟಿ ರೂ. ಇತ್ತು.