ನವ ದೆಹಲಿ: ಕಳೆದ ನವೆಂಬರ್‌ನಲ್ಲಿ ಚಿಲ್ಲರೆ ಬಡ್ಡಿ ದರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗುರಿಯ ಒಳಗೆ ಬಂದಿರುವುದರಿಂದ, ಅಂದರೆ ಶೇ.6ಕ್ಕಿಂತ ಕಡಿಮೆ ಮಟ್ಟಕ್ಕೆ ತಗ್ಗಿರುವುದರಿಂದ ಬಡ್ಡಿ ದರ (Interest rate) ಏರಿಕೆ ನಿಲ್ಲುವ ನಿರೀಕ್ಷೆ ಉಂಟಾಗಿದೆ.
ರಿಸರ್ವ್ ಬ್ಯಾಂಕ್ ಪ್ರಕಾರ ಚಿಲ್ಲರೆ ಹಣದುಬ್ಬರದ ಪ್ರಮಾಣ ಶೇ.2ಕ್ಕಿಂತ ಕಡಿಮೆ ಆಗಬಾರದು. ಹಾಗೂ ಶೇ. 6 ಮೀರಕೂಡದು. ಕಳೆದ ನವೆಂಬರ್‌ನಲ್ಲಿ 5.85% ಕ್ಕೆ ಇಳಿಕೆಯಾಗಿದೆ. ಕಳೆದ 21 ತಿಂಗಳಿನಲ್ಲಿಯೇ ಇದು ಕನಿಷ್ಠ ಮಟ್ಟದ ಹಣದುಬ್ಬರ ಪ್ರಮಾಣವಾಗಿದೆ. ಸಗಟು ಹಣದುಬ್ಬರ ಕೂಡ ನವೆಂಬರ್‌ನಲ್ಲಿ 8.39%ಕ್ಕೆ ತಗ್ಗಿದೆ.
ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಅದರ ಪ್ರಭವದ ಬಗ್ಗೆ ಈಗ ಅಧ್ಯಯನ ನಡೆಯುತ್ತಿದೆ. ಆದ್ದರಿಂದ ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗದಂತೆ, ಬಡ್ಡಿ ದರಗಳನ್ನು ನಿಯಂತ್ರಿಸಬೇಕಾಗಿದೆ. ಉನ್ನತ ಮಟ್ಟದ ಬಡ್ಡಿ ದರ ಇದ್ದಾಗ ಹಣದುಬ್ಬರ ತಗ್ಗಿದರೂ, ಆರ್ಥಿಕ ಬೆಳವಣಿಗೆಗೆ ತೊಡಕಾಗುವ ಅಪಾಯವೂ ಇರುತ್ತದೆ. ಆದ್ದರಿಂದ ಆರ್‌ಬಿಐ ತನ್ನ ಟಾರ್ಗೆಟ್ ಒಳಗೆ ಹಣದುಬ್ಬರ ಇಳಿದಿರುವುದರಿಂದ, ರೆಪೊ ದರ ಏರಿಕೆಯನ್ನು ನಿಲ್ಲಿಸುವುದು ಸೂಕ್ತ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.
ಚಳಿಗಾಲದ ಅವಧಿಯ ತರಕಾರಿಗಳು, ಧಾನ್ಯಗಳು ಮಾರುಕಟ್ಟೆಗೆ ಶೀಘ್ರ ಬರಲಿದ್ದು, ಹಣದುಬ್ಬರ ನಿಯಂತ್ರಣದ ದೃಷ್ಟಿಯಿಂದ ನಿರ್ಣಾಯಕವಾಗಲಿದೆ. ಈಗಾಗಲೇ ಅಕ್ಕಿ, ಆಲೂಗಡ್ಡೆ, ಖಾದ್ಯ ತೈಲಗಳ ದರದಲ್ಲಿ 25% ಇಳಿಕೆಯಾಗಿದೆ.