ನವ ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಮುಖವಾಗಿದೆ. ಕಳೆದ ಎರಡು ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ದರ ಇಳಿಕೆಯಾಗುವ ಸಾಧ್ಯತೆ ಇದೆ. ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲ ದರದಲ್ಲಿ ಬುಧವಾರ ಬ್ಯಾರೆಲ್‌ಗೆ 4 ಡಾಲರ್ ದರ ಇಳಿಕೆಯಾಗಿದೆ. (Oil price) ವಾಯಿದಾ ವಹಿವಾಟಿನಲ್ಲಿ ಅಕ್ಟೋಬರ್ ಅವಧಿಗೆ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 95.89 ಡಾಲರ್‌ಗೆ ತಗ್ಗಿದೆ.
ಪ್ರಮುಖ ರಾಷ್ಟ್ರಗಳು ಹಣದುಬ್ಬರವನ್ನು ಹತ್ತಿಕ್ಕಲು ಬಡ್ಡಿ ದರಗಳನ್ನು ಏರಿಸುತ್ತಿರುವುದರಿಂದ ಬೆಳವಣಿಗೆಗೆ ಧಕ್ಕೆಯಾಗುವ ಕಳವಳ, ಚೀನಾ ಕೋವಿಡ್ ಹತ್ತಿಕ್ಕಲು ಕಠಿಣ ನಿರ್ಬಂಧವನ್ನು ಮುಂದುವರಿಸಿರುವುದರಿಂದ ಅಲ್ಲಿ ತೈಲಕ್ಕೆ ಬೇಡಿಕೆ ತಗ್ಗುವ ಭೀತಿ, ಇರಾನ್‌ನಿಂದ ಕಚ್ಚಾ ತೈಲ ಪೂರೈಕೆ ನಿರೀಕ್ಷೆಯ ಪರಿಣಾಮ ಕಚ್ಚಾ ತೈಲ ದರ ಇಳಿಮುಖವಾಗಿದೆ. ಕಚ್ಚಾ ತೈಲದ ದರ ಆಗಸ್ಟ್‌ನಲ್ಲಿ 6% ತಗ್ಗಿದೆ.
ಕಚ್ಚಾ ತೈಲ ದರ ಇಳಿಮುಖವಾಗಲು ಕಾರಣ
ಆರ್ಥಿಕತೆಯ ಮಂದಗತಿ: ಜಾಗತಿಕ ಆರ್ಥಿಕ ಮಂದಗತಿಯ ಪರಿಣಾಮ ಕಚ್ಚಾ ತೈಲಕ್ಕೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಉಂಟಾಗಿದ್ದು, ದರ ಇಳಿಕೆಯ ಹಾದಿಯಲ್ಲಿದೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಚ್ಚಾ ತೈಲ ಬಳಕೆಯಾಗುತ್ತಿಲ್ಲ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಚೀನಾದಲ್ಲಿ ಬೇಡಿಕೆ ಇಳಿಕೆ ಸಾಧ್ಯತೆ: ಚೀನಾದ ಎಕಾನಮಿ ಕಳೆದ ಜುಲೈನಲ್ಲಿ ನಿರೀಕ್ಷಿತ ಬೆಳವಣಿಗೆ ದಾಖಲಿಸಿಲ್ಲ. ಇದು ಮುಂಬರುವ ದಿನಗಳಲ್ಲಿ ಕಚ್ಚಾ ತೈಲದ ಬೇಡಿಕೆ ತಗ್ಗಿಸುವ ನಿರೀಕ್ಷೆ ಉಂಟಾಗಿದ್ದು, ದರ ಇಳಿಕೆಗೆ ಕಾರಣಗಳಲ್ಲೊಂದು.
ಅಮೆರಿಕದ ಬಿಗಿ ಹಣಕಾಸು ನೀತಿ: ಅಮೆರಿಕ ಕಳೆದ ವಾರ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಬಡ್ಡಿ ದರವನ್ನು ಏರಿಸುವ ಸುಳಿವು ನೀಡಿದೆ. ಇದು ತೈಲಕ್ಕೆ ಬೇಡಿಕೆಯನ್ನು ತಗ್ಗಿಸುವ ಸಾಧ್ಯತೆ ಉಂಟಾಗಿದೆ. ರಷ್ಯಾವು ಏಷ್ಯಾದ ಪ್ರಮುಖ ತೈಲ ಆಮದುದಾರ ರಾಷ್ಟ್ರಗಳಾದ ಭಾರತ ಮತ್ತು ಚೀನಾಕ್ಕೆ ಕಚ್ಚಾ ತೈಲವನ್ನು ಪೂರೈಸುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ಮತ್ತು ಇತರ ಉತ್ಪಾದಕ ರಾಷ್ಟ್ರಗಳು ಪೂರೈಸುತ್ತಿವೆ.
ರಷ್ಯಾದಿಂದ ದಾಖಲೆಯ ಪೂರೈಕೆ: ರಷ್ಯಾವು ಇದುವರೆಗೆ ಕಂಡರಿಯದಷ್ಟು ಗರಿಷ್ಠ ಪ್ರಮಾಣದಲ್ಲಿ ಕಳೆದ ಆಗಸ್ಟ್‌ನಲ್ಲಿ ಕಚ್ಚಾ ತೈಲವನ್ನು ರಫ್ತು ಮಾಡಿದೆ. ರಷ್ಯಾದ ಸಾರ್ವಜನಿಕ ತೈಲ ಕಂಪನಿ ಗಾಜ್‌ಪ್ರೋಮ್‌ನ ಲಾಭ ಈ ವರ್ಷದ ಮೊದಲಾರ್ಧದಲ್ಲಿ ಇಮ್ಮಡಿಗೂ ಹೆಚ್ಚಾಗಿದೆ. ಯುರೋಪ್‌ನಲ್ಲಿ ತೈಲ ದರ ಜಿಗಿದಿರುವುದು ಕಂಪನಿಗೆ ಲಾಭದಾಯಕವಾಗಿ ಪರಿಣಮಿಸಿದೆ.
ಇರಾನ್ ತೈಲ ಲಭಿಸಿದರೆ ದರ ಇಳಿಕೆ
ಭಾರತ ಸೇರಿದಂತೆ ಪ್ರಮುಖ ತೈಲ ಆಮದುದಾರ ರಾಷ್ಟ್ರಗಳು ಇರಾನ್ ವಿರುದ್ಧದ ಪಾಶ್ಚಿಮಾತ್ಯ ದೇಶಗಳ ನಿರ್ಬಂಧ ತೆರವಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಇರಾನ್ ಮೂಲದ ತೈಲ ಲಭಿಸಲಿ ಎಂದು ನಿರೀಕ್ಷಿಸುತ್ತಿವೆ. ಏಕೆಂದರೆ ಇರಾನ್‌ನಿಂದ ದಿನಕ್ಕೆ 10-20 ಲಕ್ಷ ಬ್ಯಾರೆಲ್ ತೈಲ ಲಭಿಸಿದರೆ ದರ ಇಳಿಕೆಗೆ ಹಾದಿ ಸುಗಮವಾಗಲಿದೆ.
ಇದನ್ನೂ ಓದಿ:Windfal Tax | ದೇಶೀಯ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್ ತೆರಿಗೆ ಕಡಿತಗೊಳಿಸಿದ ಕೇಂದ್ರ