ನವ ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ಕೆಲ ಬ್ಯಾಂಕ್‌ಗಳಲ್ಲಿ ಸೋಮವಾರ ಸರ್ವರ್ ಸಮಸ್ಯೆಯಿಂದ ಗ್ರಾಹಕರು ಯುಪಿಐ, ನೆಟ್ ಬ್ಯಾಂಕಿಂಗ್ ಸೇವೆ ಸಿಗದೆ ಪರದಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. (Banking service down) ಸೋಮವಾರ ಬೆಳಗ್ಗೆಯಿಂದಲೇ ಎಸ್‌ಬಿಐ ಸರ್ವರ್ ಡೌನ್ ಆಗಿತ್ತು. ಬಳಕೆದಾರರು ಟ್ವಿಟರ್ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದರು.
ದೇಶದ ಅತಿ ದೊಡ್ಡ ಬ್ಯಾಂಕ್‌ನಲ್ಲಿ ನೆಟ್ ಬ್ಯಾಂಕಿಂಗ್, ಯುಪಿಐ, ಯೂನೊ ಅಪ್ಲಿಕೇಶನ್ ಬೆಳಗ್ಗೆಯಿಂದಲೇ ಸಮಸ್ಯೆಯ ಪರಿಣಾಮ ಸಮರ್ಪಕವಾಗಿ ಕಾರ್ಯನಿರ್ವಹಿಸಲಿಲ್ಲ. ಕ್ರೆಡಿಟ್ ಕಾರ್ಡ್ ಪೇಮೆಂಟ್‌ಗಳು ಹಾಗೂ ಇತರ ಆನ್‌ಲೈನ್ ಸೇವೆಗಳಲ್ಲಿ ಅಡಚಣೆ ಕಂಡು ಬಂದಿತು. ಹಲವು ಕಡೆಗಳಲ್ಲಿ ಎಟಿಎಂಗಳಲ್ಲಿಯೂ ನಗದು ದೊರೆಯಲಿಲ್ಲ ಎಂದು ಗ್ರಾಹಕರು ದೂರಿದರು. ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲೂ ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ಸೇವೆಗಳಲ್ಲಿ ಅಡಚಣೆಯಲ್ಲಿ ಉಂಟಾಯಿತು.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲೂ ಗ್ರಾಹಕರು ಮಾರ್ಚ್ 3ರಂದು ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಸರಿಯಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು. ಮುಂಬಯಿ, ದಿಲ್ಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ನಾಗ್ಪುರ, ಸೂರತ್, ಚಂಡೀಗಢ ಮತ್ತಿತರ ನಗರಗಳಲ್ಲಿ ತಾಂತ್ರಿಕ ಅಡಚಣೆ ಉಂಟಾಗಿತ್ತು.