ಬೆಂಗಳೂರು: ದೇಶದಲ್ಲಿ ಉದ್ಯೋಗ ಸೃಷ್ಟಿಯ ಪ್ರಮುಖ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( Invest Karnataka 2022 ) ಅವರು ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಯುವ ಸಂಪನ್ಮೂಲದ ಪ್ರತಿಭೆ ಜಗತ್ತಿನ ಗಮನ ಸೆಳೆದಿದೆ. ದೇಶದ ಜನಸಂಖ್ಯೆಯಲ್ಲಿ ಕೇವಲ 5 % ಇರುವ ಕರ್ನಾಟಕವು ದೇಶದ ಜಿಡಿಪಿಗೆ 8.8% ಕೊಡುಗೆ ನೀಡುತ್ತಿದೆ. ದೇಶದಲ್ಲಿ ಸೃಷ್ಟಿಯಾಗುತ್ತಿರುವ ಔಪಚಾರಿಕ ಉದ್ಯೋಗಗಳಲ್ಲಿ 10% ಉದ್ಯೋಗಗಳು ಕರ್ನಾಟಕದಲ್ಲಿ ಸೃಷ್ಟಿಯಾಗುತ್ತಿರುವುದು ಗಮನಾರ್ಹ ಎಂದು ಶ್ಲಾಘಿಸಿದರು.
ಅನಿಶ್ಚಿತತೆ ಎದುರಿಸಲು ಭಾರತ ಸಜ್ಜು
ಜಗತ್ತಿನಾದ್ಯಂತ ಪ್ರತಿಯೊಂದು ದೇಶದಲ್ಲೂ ಅನಿಶ್ಚಿತತೆ ಕಾಡುತ್ತಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಆಹಾರ ಧಾನ್ಯ, ಇಂಧನ, ತೈಲ ಸಂಪನ್ಮೂಲವನ್ನು ಪೂರೈಸುವ ದೇಶಗಳಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದರದಿಂದ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಉಂಟಾಗಿದೆ. ಹೀಗಾಗಿ ರಾಷ್ಟ್ರಗಳು ಬದಲಾಗಿರುವ ಪರಿಸ್ಥಿತಿಯಲ್ಲಿ ಕಚ್ಚಾ ವಸ್ತುಗಳಿಗೆ ಪರ್ಯಾಯ ಮೂಲಗಳನ್ನು ಹುಡುಕುತ್ತಿವೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಆರ್ಥಿಕ ಹಿಂಜರಿತದ ಭೀತಿಯೂ ಉಂಟಾಗಿದೆ. (Invest Karnataka 2022 ) ಈ ಸವಾಲುಗಳನ್ನು ಎದುರಿಸಲು ಭಾರತ ಸಕಲ ರೀತಿಯಲ್ಲಿ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕರ್ನಾಟಕವು ಉದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಮಾದರಿಯಾಗಿದೆ. ಐದು ಲಕ್ಷ ಕೋಟಿ ರೂ. ಹೂಡಿಕೆಯ ಗುರಿ ಇದೀಗ 7 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. 2.8 ಲಕ್ಷ ಕೋಟಿ ರೂ. ಪ್ರಸ್ತಾಪಗಳು ಈಗಾಗಲೇ ಅಂಗೀಕಾರವಾಗಿದೆ. ಇದು ಹೂಡಿಕೆದಾರರಲ್ಲಿ ಆತ್ಮ ವಿಶ್ವಾಸ ಹುಟ್ಟಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಹಸಿರು ಇಂಧನ ಸೇರಿದಂತೆ ಹತ್ತಾರು ಹೊಸ ವಲಯಗಳಲ್ಲಿ ಕರ್ನಾಟಕದಲ್ಲಿ ಹೂಡಿಕೆಯಾಗುತ್ತಿದೆ. ಕರ್ನಾಟಕ ಕೇವಲ ಮಾಹಿತಿ ತಂತ್ರಜ್ಞಾನ ಸೇವೆಗೆ ಹೆಸರಾಗಿಲ್ಲ. ಇಲ್ಲಿ ಇನ್ನೂ ಹಲವು ಸಾಂಪ್ರದಾಯಿಕ ಉದ್ದಿಮೆಗಳು ಬೆಳೆದಿವೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ.
ಕರ್ನಾಟಕವು ನವೀಕರಿಸಬಹುದಾದ ಇಂಧನ ನೀತಿಯಲ್ಲಿ ಮಾದರಿಯಾಗಿದೆ. ಕೈಗಾರಿಕೆಗಳ ಬೆಳವಣಿಗೆಗೆ ಪಾರದರ್ಶಕ ಪ್ರಕ್ರಿಯೆ ಅಗತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಹೊಸ ಸಂದೇಶವನ್ನು ಸಾರಿದೆ. ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ನಾಯಕತ್ವ ವಹಿಸಿದೆ. ನವೀಕರಿಸಬಹುದಾದ ವಲಯ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಆಟೊಮೊಬೈಲ್ ಬಿಡಿ ಭಾಗಗಳ ಉತ್ಪಾದನೆ, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸ್ಟಾರ್ಟಪ್, ಏರೋಸ್ಪೇಸ್, ಮೆಶೀನ್ ಟೂಲ್ಸ್, ಬಯೊಟೆಕ್, ಎಲೆಕ್ಟ್ರಾನಿಕ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು.