ಬೆಂಗಳೂರು: ಕರ್ನಾಟಕ ಜಗತ್ತಿನ ಎಲ್ಲ ಭಾಗದ ಹೂಡಿಕೆದಾರರಿಗೆ ಪ್ರಶಸ್ತ ತಾಣವಾಗಿದೆ. ಕನ್ನಡ ರಾಜ್ಯೋತ್ಸವದ ಮರು ದಿನವೇ ಜಾಗತಿಕ ಹೂಡಿಕೆದಾರರ ಸಮಾವೇಶ ಆಗುತ್ತಿರುವುದು ವಿಶೇಷ. ಇದು ನನಗೆ ಕೈಗಾರಿಕನಾಗಿ ಮೂರನೇ ಸಮಾವೇಶ ಆಗಿದೆ. 2022-23ರ ಈ ಸಮಾವೇಶದ ಉದ್ದೇಶ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಾಗಿದೆ ( Invest Karnataka) ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದರು.
ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಟರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರು ಕರ್ನಾಟಕದ ಕೈಗಾರಿಕೆಯ ಬುನಾದಿಯನ್ನು ನಿರ್ಮಿಸಿದವರು. ಕೈಗಾರಿಕೆ ಇಲ್ಲದಿದ್ದರೆ ಅವನತಿ ಎಂದಿದ್ದರು ವಿಶ್ವೇಶ್ವರಯ್ಯನವರು. ಈಗ ಪ್ರಧಾನಿಯವರ ಆಶಯದಂತೆ ಆತ್ಮನಿರ್ಭರ್ ಭಾರತ್ ಅಭಿಯಾನದಲ್ಲಿ ಕರ್ನಾಟಕ ಮುಂದುವರಿಯುತ್ತಿದೆ ಎಂದು ಸಚಿವ ನಿರಾಣಿ ವಿವರಿಸಿದರು.
ಕರ್ನಾಟಕವು ಉದ್ಯಮ ಸ್ನೇಹಿ ನೀತಿಯಲ್ಲಿ ಮುಂಚೂಣಿಯಲ್ಲಿದೆ. ಹೂಡಿಕೆದಾರರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನ ನೀತಿ, ಆಟೊಮೊಬೈಲ್ ಬಿಡಿಭಾಗಗಳು, ಸ್ಟಾರ್ಟಪ್, ಐಟಿ-ಬಿಟಿ ವಲಯದ ಅಭಿವೃದ್ಧಿಯಲ್ಲಿ ರಾಜ್ಯ ತನ್ನದೇ ಛಾಪು ಮೂಡಿಸಿದೆ. ಮೈಸೂರು, ತುಮಕೂರು, ಮಂಗಳೂರು, ಹುಬ್ಬಳ್ಳಿ-ಕಲಬುರಗಿ ಮೊದಲಾದ ಇತರ ನಗರಗಳಲ್ಲಿ ಕೂಡ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಎರಡನೇ ಸ್ತರದ ನಗರಗಳಲ್ಲಿ ಮುಂದಿನ ದಿನಗಳಲ್ಲಿ 10,000 ಕೋಟಿ ರೂ. ಹೂಡಿಕೆ ಆಗಲಿದೆ ಎಂದು ಸಚಿವರು ತಿಳಿಸಿದರು.