Site icon Vistara News

Invest Karnataka 2022 | ಕಲ್ಲಿದ್ದಲು ವಲಯದಲ್ಲಿ ಹೂಡಿಕೆಗೆ ಅವಕಾಶ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

prahld joshi

ಬೆಂಗಳೂರು: ಬಂಡವಾಳ ಹೂಡಿಕೆಗೆ ಕಲ್ಲಿದ್ದಲು ಕ್ಷೇತ್ರದಲ್ಲಿ ಆಕರ್ಷಕ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ (Invest Karnataka 2022) ಇಂದು ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ದೇಶೀಯವಾಗಿ ಕಲ್ಲಿದ್ದಲು ಉತ್ಪಾದನೆ 90 ಕೋಟಿ ಟನ್‌ಗೆ ಏರಿಕೆಯಾಗಿದೆ. 2025-26ರ ಸಾಲಿನಲ್ಲಿ ಕೋಲ್ ಇಂಡಿಯಾ ಒಂದೇ 100 ಕೋಟಿ ಟನ್ ನಷ್ಟು ಕಲ್ಲಿದ್ದಲು ಉತ್ಪಾದಿಸಲಿದೆ ಎಂದು ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶಗಳಿವೆ. ಉದ್ಯಮ ಸ್ನೇಹಿ ವಾತಾವರಣವನ್ನು ಕಲ್ಲಿದ್ದಲು ಕ್ಷೇತ್ರದಲ್ಲಿ ಕಲ್ಪಿಸಲಾಗಿದೆ. ದೇಶದ ಜಿಡಿಪಿಗೆ ಶೇ 2.5 ರಷ್ಟು ಕೊಡುಗೆಯನ್ನು ಕಲ್ಲಿದ್ದಲು ಕ್ಷೇತ್ರದಿಂದ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶನ ನೀಡಿದ್ದಾರೆ. ಈ ಗುರಿ ಮುಟ್ಟುವತ್ತ ನಾವು ಹೆಜ್ಜೆಯಿಡುತ್ತಿದ್ದೇವೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಹೂಡಿಕೆದಾರರನ್ನು ಸ್ವಾಗತಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ದಿಲ್ಲಿಯಲ್ಲಿ ನಾಳೆ 124 ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದರು. ಗಣಿಗಾರಿಕೆಗೆ ಬೇಕಾದ 21 ಕ್ಲಿಯರೆನ್ಸ್ ಗಳನ್ನು ಸುಲಲಿತವಾಗಿ ವರ್ಗಾಯಿಸುವ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದರ ಪರಿಣಾಮವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾಗುತ್ತಿದ್ದು, ಅತಿ ವೇಗದಲ್ಲಿ ಉತ್ಪಾದನೆ ಕೂಡ ಹೆಚ್ಚಿದೆ ಎಂದರು.

Exit mobile version