ನ್ಯೂಯಾರ್ಕ್: ಜಾಗತಿಕ ಹೂಡಿಕೆದಾರ ವಾರೆನ್ ಬಫೆಟ್ (92) ಷೇರು ಹೂಡಿಕೆದಾರರಿಗೆ ನೀಡಿರುವ ಸಲಹೆಯೊಂದರಲ್ಲಿ, (Warren Buffet) ದೀರ್ಘಕಾಲೀನ ಭವಿಷ್ಯದ ಬಗ್ಗೆ ಆಶಾವಾದಿಗಳಾಗಿ ಭರವಸೆ ಇಡಬೇಕೇ ವಿನಾ, ಈಗಿನ ಅನಿಶ್ಚಿತತೆ ಬಗ್ಗೆ ಕಳವಳಪಡಬಾರದು ಎಂದು ಸಲಹೆ ನೀಡಿದ್ದಾರೆ. ಅಮೆರಿಕದ ಆರ್ಥಿಕತೆ (US Economy) ಹಾಗೂ ತಮ್ಮ ಬರ್ಕ್‌ಶೈರ್ ಹಾಥವೇ ಬಗ್ಗೆ ತಮಗೆ ಅತೀವ ವಿಶ್ವಾಸ ಇದೆ ಎಂದು ಷೇರುದಾರರಿಗೆ ಬರೆದಿರುವ ವಾರ್ಷಿಕ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ 2022ರಲ್ಲಿ ಅಧಿಕ ಹಣದುಬ್ಬರ ಮತ್ತು ಇತರ ಕಾರಣಗಳಿಂದಾಗಿ ಷೇರುಗಳ ದರಗಳು ಕುಸಿದಿತ್ತು. ಆದರೆ ಇದಕ್ಕೆ ತೀರಾ ಕಳವಳಪಡಬೇಕಿಲ್ಲ. ಅಮೆರಿಕ ಮತ್ತು ತಮ್ಮ ಕಂಪನಿಯ ದೀರ್ಘಕಾಲೀ ಭವಿಷ್ಯ ಉತ್ತಮವಾಗಿದೆ ಎಂದು ವಾರೆನ್ ಬಫೆಟ್ ಹೇಳಿದ್ದಾರೆ.
ಬರ್ಕ್‌ಶೈರ್ ಕೇವಲ ಷೇರುಗಳನ್ನು ಖರೀದಿಸುವುದಿಲ್ಲ, ಉತ್ತಮ ಮೌಲ್ಯವನ್ನು ಕೊಡಬಹುದಾದ ಬುಸಿನೆಸ್ ಅನ್ನು ಖರೀದಿಸುತ್ತದೆ. ಹೂಡಿಕೆಯ ದೃಷ್ಟಿಕೋನ ಸದಾ ಹೀಗಿರಬೇಕು. 1994ರಲ್ಲಿ ಬರ್ಕ್‌ಶೈರ್ ಕೋಕಾಕೋಲಾದ 1.3 ಶತಕೋಟಿ ಡಾಲರ್ (10,650 ಕೋಟಿ ರೂ.) ಮೌಲ್ಯದ ಷೇರುಗಳನ್ನು ಖರೀದಿಸಿತ್ತು. ಈಗ ಅದರ ಮೌಲ್ಯ 25 ಶತಕೋಟಿ ಡಾಲರ್ ( 2.29 ಲಕ್ಷ ಕೋಟಿ ರೂ.) ಆಗಿದೆ. 1995ರಲ್ಲಿ ಅಮೆರಿಕನ್ ಎಕ್ಸ್ ಪ್ರೆಸ್‌ನಲ್ಲೂ 1.3 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಲಾಗಿತ್ತು. ಈಗ ಅದರ ಮೌಲ್ಯ 22 ಶತಕೋಟಿ ಡಾಲರ್‌ಗೆ (೧.೮೦ ಲಕ್ಷ ಕೋಟಿ ರೂ.) ಏರಿದೆ ಎಂದರು.