ಬೆಂಗಳೂರು: ಐಫೋನ್ ಉತ್ಪಾದಿಸುವ ಪ್ರಮುಖ ಗುತ್ತಿಗೆದಾರ ಫಾಕ್ಸ್‌ಕಾನ್, ಬೆಂಗಳೂರಿನಲ್ಲಿ ತನ್ನ ಮುಂಬರುವ ಪ್ರಾಜೆಕ್ಟ್ ಎಲಿಫೆಂಟ್ (Project Elephant) ಹೂಡಿಕೆ ಯೋಜನೆಯನ್ನು ಜಾರಿಗೊಳಿಸುವುದಾಗಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಖಚಿತಪಡಿಸಿದೆ. ಇದರೊಂದಿಗೆ ಘಟಕದ ಸ್ಥಾಪನೆಯ ಬಗ್ಗೆ ಉಂಟಾಗಿದ್ದ ಊಹಾಪೋಹಗಳಿಗೆ (Foxconn Project in Bangaluru) ತೆರೆ ಎಳೆದಿದೆ.
ಕಳೆದ ಶುಕ್ರವಾರ ಕಂಪನಿ ಎಂಒಯುಗೆ ಸಹಿ ಹಾಕಿದ್ದರೂ, ಅದು ನೀಡಿದ್ದ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿತ್ತು. ಈ ನಡುವೆ ತೆಲಂಗಾಣದಲ್ಲೂ ಕಂಪನಿ ಉತ್ಪಾದನಾ ಘಟಕಕ್ಕೆ ಒಪ್ಪಂದ ಮಾಡಿಕೊಂಡಿರುವುದರಿಂದ ಗೊಂದಲ ಸೃಷ್ಟಿಯಾಗಿತ್ತು. ಆದರೆ ಇವೆರಡೂ ಪ್ರತ್ಯೇಕ ಹೂಡಿಕೆಯ ಯೋಜನೆಗಳಾಗಿವೆ.
ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸೋಮವಾರ ಬರೆದಿರುವ ಪತ್ರದಲ್ಲಿ, ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಯ ಜಾರಿಗೆ ಕಂಪನಿಯ ತಂಡವು ಸರ್ಕಾರದ ಜತೆಗೆ ನಿಕಟ ಸಂಪರ್ಕ ಇಟ್ಟುಕೊಳ್ಳಲಿದೆ. ಈ ಯೋಜನೆಯು ರಾಜ್ಯದಲ್ಲಿ ಕಂಪನಿಯ ಇತರ ಯೋಜನೆಗಳ ಅನುಷ್ಠಾನಕ್ಕೆ ಬುನಾದಿಯಾಗಲಿದೆ. ಮೆಕಾನಿಕಲ್, ಎಲೆಕ್ಟ್ರಿಕಲ್ ವಾಹನ, ಐಸಿ ಡಿಸೈನ್, ಸೆಮಿಕಂಡಕ್ಟರ್ ವಲಯದದಲ್ಲಿ ಕಂಪನಿಯ ಯೋಜನೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಭೇಟಿ ಯಶಸ್ವಿಯಾಗಿರುವ ಕುರಿತು ರಾಜ್ಯ ಸರ್ಕಾರಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸರಕುಗಳ ಸಾಗಣೆಗೆ ಇರುವ ಮೂಲ ಸೌಕರ್ಯಗಳು ಉತ್ತಮವಾಗಿದೆ ಎಂದು ಶ್ಲಾಘಿಸಿದ್ದಾರೆ. ಎಲೆಕ್ಟ್ರಾನಿಕ್ ಉತ್ಪಾದನೆಗೆ ಬೆಂಗಳೂರನ್ನು ಜಾಗತಿಕ ಹೂಡಿಕೆ ತಾಣ ಮಾಡುವ ಸಿಎಂ ದೂರದೃಷ್ಟಿ ಸ್ವಾಗತಾರ್ಹ ಎಂದಿದ್ದಾರೆ.
ಏನಿದು ಪ್ರಾಜೆಕ್ಟ್ ಎಲಿಫೆಂಟ್?
ಫಾಕ್ಸ್‌ಕಾನ್ ಬೆಂಗಳೂರಿನ ಹೊರವಲಯದಲ್ಲಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಪ್ರಾಜೆಕ್ಟ್ ಎಲಿಫೆಂಟ್‌ನಲ್ಲಿ ಹಲವು ಯೋಜನೆಗಳನ್ನು ಕಂಪನಿ ಪಟ್ಟಿ ಮಾಡಿದೆ. ಪ್ರಿಸಿಶನ್ ಮೆಶೀನಿಂಗ್ (precision machininģ) ಅಂದರೆ ಹಲವು ಇಂಡಸ್ಟ್ರಿಗಳಿಗೆ ಅಗತ್ಯವಿರುವ ಟೂಲ್ಸ್‌ಗಳು, ಸಣ್ಣ ಮತ್ತು ದೊಡ್ಡ ಬಿಡಿಭಾಗಗಳು, ಎಲೆಕ್ಟ್ರಿಕ್ ವೆಹಿಕಲ್, ಐಸಿ ಡಿಸೈನ್ & ಸೆಮಿಕಂಡಕ್ಟರ್ ಉತ್ಪಾದನೆಯನ್ನು ಪ್ರಾಜೆಕ್ಟ್ ಎಲಿಫೆಂಟ್ ಒಳಗೊಂಡಿದೆ.
ಇದನ್ನೂ ಓದಿ: iPhone : ತೆಲಂಗಾಣದಲ್ಲಿ ಐಫೋನ್ ಉತ್ಪಾದನೆಯ ಘಟಕ ಸ್ಥಾಪನೆಗೆ ಫಾಕ್ಸ್‌ಕಾನ್ ಒಪ್ಪಿಗೆ