ನವದೆಹಲಿ: ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ನೇರ ಪ್ರಸಾರದ ಹಕ್ಕುಗಳ ಹರಾಜು ಭಾನುವಾರ ಆರಂಭವಾಗಿದ್ದು, ಮೊದಲ ದಿನವೇ ಟಿ.ವಿ ಮತ್ತು ಡಿಜಿಟಲ್ ಹಕ್ಕುಗಳಿಗೆ ಬರೋಬ್ಬರಿ ₹43,000 ಕೋಟಿ ಬಿಡ್ ಸಲ್ಲಿಕೆಯಾಗಿದೆ.
ಹೆಚ್ಚುವರಿಯಾಗಿ, ಟೂರ್ನಮೆಂಟ್‌ನ ಪ್ರತಿಯೊಂದು ಪಂದ್ಯದ ನೇರ ಪ್ರಸಾರದ ಹಕ್ಕುಗಳ ಒಟ್ಟು ಮೌಲ್ಯ 100 ಕೋಟಿ ರೂ. ಗಡಿ ದಾಟಿದೆ.
ಹರಾಜು ಪ್ರಕ್ರಿಯೆ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದುವರಿಯಲಿದೆ. ಪ್ಯಾಕೇಜ್-ಎಯಲ್ಲಿ 16 ಬಿಡ್‌ಗಳು ಸಲ್ಲಿಕೆಯಾಗಿದೆ. ಇದು ಭಾರತದಲ್ಲಿ ನೇರ ಪ್ರಸಾರಕ್ಕೆ ಸಂಬಂಧಿಸಿದೆ. ಪ್ಯಾಕೇಜ್ ಬಿಯಲ್ಲಿ ಡಿಜಿಟಲ್ ಹಕ್ಕುಗಳು ಇದ್ದು, 30 ಬಿಡ್‌ಗಳು ಸಲ್ಲಿಕೆಯಾಗಿದೆ. ಮುಂಬಯಿನಲ್ಲಿ ಆನ್‌ಲೈನ್ ಮೂಲಕ ಹರಾಜು ನಡೆಯುತ್ತಿದೆ. ಟಿ.ವಿ ಮತ್ತು ಡಿಜಿಟಲ್ ನೇರ ಪ್ರಸಾರದ ಹಕ್ಕುಗಳ ಅಂತಿಮ ಬಿಡ್ 43,255 ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಹರಾಜಿನ ಮೊದಲ ದಿನದ ಮುಖ್ಯಾಂಶಗಳು:
- ಟಿ.ವಿ ಪ್ರಸಾರದ ಹಕ್ಕುಗಳು ಪ್ರತಿ ಮ್ಯಾಚಿಗೆ ₹57 ಕೋಟಿಯಂತೆ ಒಟ್ಟು ₹23,370 ಕೋಟಿ ಬಿಡ್ ಗಳಿಸಿವೆ.
- ಡಿಜಿಟಲ್ ಹಕ್ಕುಗಳಿಗೆ ಸಂಬಂಧಿಸಿ ಪ್ರತಿ ಮ್ಯಾಚಿಗೆ ₹48 ಕೋಟಿಯಂತೆ ₹19,680 ಕೋಟಿ ಬಿಡ್ ಸಲ್ಲಿಕೆಯಾಗಿದೆ.
- ಐಪಿಎಲ್ನ ಪ್ರತಿ ಪಂದ್ಯದ ಮೌಲ್ಯ ₹100 ಕೋಟಿಗೂ ಅಧಿಕ.
- ಮುಂದಿನ 5 ವರ್ಷಗಳಿಗೆ 410 ಪಂದ್ಯಗಳು ನಿಗದಿಯಾಗಿವೆ. (2023-2027 ತನಕ)
- ಹರಾಜಿನ ಕಣದಲ್ಲಿರುವ ಸ್ಪರ್ಧಿಗಳು: ಡಿಸ್ನಿಸ್ಟಾರ್, ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ, ವಯಾಕಾಮ್ 18 ಮತ್ತು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್.
ಒಟ್ಟು ಬಿಡ್ ಮೌಲ್ಯ ₹50,000-52,000 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ವಿಸ್ತಾರ Explainer : IPL ಪ್ರಸಾರ ಹಕ್ಕಿಗಾಗಿ ದಿಗ್ಗಜರ ವಾರ್!